ಬ್ರಹ್ಮಾವರ, ಡಿ.12 (DaijiworldNews/MB) : ಬ್ರಹ್ಮಾವರ ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ಬ್ರಹ್ಮಾವರ ಇದರ ಪುನರ್ ನಿರ್ಮಾಣದ ಜತೆಗೆ ಕೃಷಿ ಆಧಾರಿತ ಕೈಗಾರಿಕೆಗೆ ಒತ್ತುಕೊಟ್ಟು ಆಧುನಿಕ ತಂತ್ರಜ್ಞಾನ ಅಳವಡಿಸಿ ಲಾಭದಾಯಕ ಉತ್ಪನ್ನಗಳ ತಯಾರಿಕೆ ಹಾಗೂ ರೈತರ ಬೆಳೆಗಳನ್ನು ಪ್ರೋತ್ಸಾಹಿಸುವ ಯೋಚನೆಯೊಂದಿಗೆ ಸಂಸ್ಥೆಯನ್ನು ಲಾಭದಾಯಕಗೊಳಿಸಿ ಸಮಗ್ರ ಅಭಿವೃದ್ದಿಯ ಯೋಜನೆಗೆ ಅಧ್ಯಯನ ಮಾಡಲಾಗುವುದೆಂದು ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ತಿಳಿಸಿದರು.

ಶುಕ್ರವಾರ ಡಿಸೆಂಬರ್ 11 ರಂದು ಸಕ್ಕರೆ ಕಾರ್ಖಾನೆಯ ಕಾರ್ಯಾಲಯದಲ್ಲಿ ತಾಂತ್ರಿಕ ಮಹಾವಿದ್ಯಾಲಯದ ತಜ್ಞರೊಂದಿಗೆ ಸಮಾಲೋಚನೆ ನಡೆಯಿತು. ಸಕ್ಕರೆ ಕಾರ್ಖಾನೆಗೆ ಆವಶ್ಯವಿರುವ ಕಬ್ಬು ಬೆಳೆಯನ್ನು ಅಭಿವೃದ್ಧಿಗೊಳಿಸುವುದು ಸಕ್ಕರೆ ಉತ್ಪಾದನೆಯ ಜೊತೆಗೆ ಇಥೆನಾಲ್ ಕೋಜನರೇಶನ್, ಡಿಸ್ಟಿಲರಿ ಹಾಗೂ ಪ್ರಸಕ್ತ ಮಾರುಕಟ್ಟೆಯಲ್ಲಿ ಬೇಡಿಕೆಯಿರುವ ಕೃಷಿ ಆಧಾರಿತ ಉತ್ಪನ್ನಗಳ ತಯಾರಿಕಾ ಘಟಕಗಳನ್ನು ಸ್ಥಾಪಿಸಿ ಸಂಸ್ಥೆಯನ್ನು ಲಾಭದಾಯಕ ಗೊಳಿಸಲು ಕ್ರಮ ಕೈಗೊಳ್ಳುವುದು ಉತ್ತಮ ಎಂದು ತಜ್ಞರ ತಂಡ ಅಭಿಪ್ರಾಯಪಟ್ಟಿತು.
ಈ ಕಾರ್ಖಾನೆಯ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ಪೂರಕವಾದ ಕೋಲ್ ಸೆನೇಜ್ ವೇರ್ಡ್ನ್ ಸಂಸ್ಕರಣಾ ಘಟಕಗಳನ್ನು ಪ್ರಾರಂಭಿಸಿ ರೈತರ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ ವ್ಯವಹಾರಗಳಿಗೆ ಪ್ರೋತ್ಸಾಹಿಸುವುದರ ಬಗ್ಗೆ ಚಿಂತನೆ ನಡೆಸಲಾಯಿತು.
ಮಹಾವಿದ್ಯಾಲಯದ ಮೆಕಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ .ಶಶಿಕಾಂತ್ ಕಾರಿಂಕ, ಡಾ .ರವಿಂದ್ರ, ಡಾ. ಮುರಳೀಧರ್, ಡಾ. ಗೋನಿಯಲ್ ಡಿಮೆಲ್ಲೊ, ಡಾ. ಎಸ್ ಎ ಗೋಪಾಲ್, ಡಾ. ಅನಂತಕೃಷ್ಣ ಸೋಮಯಾಜಿ, ಡಾ. ವಿಜೇಶ, ಡಾ. ನಿತಿನ್ ಶೆಟ್ಟಿ ಹಾಗೂ ಕಾರ್ಖಾನೆಯ ವ್ಯವಸ್ಥಾಪಕ ಗೋಪಾಲಕೃಷ್ಣ ಉಪಸ್ಥಿತರಿದ್ದರು.