ಕಾರ್ಕಳ, ಡಿ.12 (DaijiworldNews/MB) : ವಿವಾಹ ಮಂಟಪದಿಂದ ಮದುಮಗನೇ ಪರಾರಿಯಾದ ಘಟನೆ ಡಿ.10 ರಂದು ಕಾರ್ಕಳ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಪರಾರಿಯಾದ ಮದುಮಗ ಕಾರ್ಕಳ ಮೂಲದವನಾಗಿದ್ದು ಬೆಂಗಳೂರು ಬನ್ನೇರುಘಟ್ಟದಲ್ಲಿ ಮಲ್ಟಿನ್ಯಾಷನಲ್ ಸಂಸ್ಥೆಯೊಂದರಲ್ಲಿ ಮ್ಯಾನೇಜ್ಮೆಂಟ್ ಕನ್ಸಲ್ಟಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಎಂಬ ಮಾಹಿತಿ ಲಭಿಸಿದೆ.
ಅಮೇರಿಕಾದಲ್ಲಿ ಉನ್ನತ ವ್ಯಾಸಂಗ ಮಾಡಿ ಕಾರ್ಕಳದಲ್ಲಿ ಎಂಬಿಬಿಎಸ್, ಎಂಡಿ ಮಾಡಿದ್ದ ಈ ಯುವಕನಿಗೆ ಕಾರ್ಕಳದ ಯುವತಿಯೊಂದಿಗೆ ನಿಶ್ಚಿತಾರ್ಥ ನಡೆದು ಡಿ. 10 ರಂದು ವಿವಾಹ ನಡೆಯಲಿತ್ತು.
ಈ ನಿಟ್ಟಿನಲ್ಲಿ ಡಿ. 9 ರಂದೇ ಆತನು ತನ್ನ ಕುಟುಂಬದೊಂದಿಗೆ ಆಗಮಿಸಿ ಸ್ಥಳೀಯ ಲಾಡ್ಜ್ ಒಂದರಲ್ಲಿ ಉಳಿದಿದ್ದ. ವಿವಾಹಕ್ಕೆ ಮುಂದಿನ ದಿನ ವಿವಾಹ ಮಂಟಪದಲ್ಲಿ ನಡೆದ ಪೂರ್ವಭಾವಿ ಶಾಸ್ತ್ರಗಳಲ್ಲಿ ಭಾಗಿಯಾಗಿದ್ದ. ಹಾಗೆಯೇ ಮದುವೆಯ ದಿನವೂ ಮಂಟಪದಲ್ಲೇ ಇದ್ದ ಆತ ಇದ್ದಕ್ಕಿದ್ದಂತೆ ಪರಾರಿಯಾಗಿದ್ದಾನೆ.
ಇನ್ನು ಆತನೊಂದಿಗೆ ಆತನ ಕುಟುಂಬಸ್ಥರು ತೆರಳಿದ್ದಾರೆ ಎಂದು ಹೇಳಲಾಗಿದೆ. ಆದರೆ ವರ ಪರಾರಿಯಾಗಲು ನಿಖರ ಕಾರಣವೇನು ಎಂದು ಈವರೆಗೂ ತಿಳಿದು ಬಂದಿಲ್ಲ.