ಬೆಳ್ತಂಗಡಿ, ಡಿ.13 (DaijiworldNews/HR): ಲಕ್ಷದ್ವೀಪೋತ್ಸವ ಆಚರಣೆಯು ಭರದಿಂದ ಸಾಗುತ್ತಿರುವ ಧರ್ಮಸ್ಥಳಕ್ಕೆ ಆಗಮಿಸುವ ಸಾವಿರಾರು ಭಕ್ತರಿಗೆ ಸಾರಿಗೆ ಕಾರ್ಮಿಕರ ಮುಷ್ಕರದಿಂದ ಅನಾನೂಕೂಲವಾಗಿದ್ದು, ಇದರಿಂದ ಕೆಎಸ್ಆರ್ಟಿಸಿ ಈ ಸಮಯದಲ್ಲಿ ಗಳಿಸುವ ಆದಾಯದಯನ್ನು ಕಳೆದುಕೊಂಡಿದೆ.


ಧರ್ಮಸ್ಥಳ ಘಟಕದಿಂದ ಪ್ರತಿನಿತ್ಯ ರಾಜ್ಯದ ವಿವಿಧೆಡೆಗೆ 350ಕ್ಕೂ ಅಧಿಕ ಬಸ್ಗಳು ಸಂಚಾರ ನಡೆಸುತ್ತವೆ. ಲಕ್ಷದೀಪೋತ್ಸವ ಸಂದರ್ಭದಲ್ಲಿ ಒಂದು ವಾರ ಕಾಲ ಹೆಚ್ಚುವರಿ ಸಂಚಾರ ಇರುತ್ತದೆ. ಮುಂಜಾನೆ 5.30 ರಿಂದ ಆರಂಭಿಸಿ ಪ್ರತೀ ಕಾಲು ತಾಸಿಗೊಂದರಂತೆ ಬೆಂಗಳೂರಿಗೆ ಮತ್ತು ಅರ್ಧ ತಾಸಿಗೆ ಒಂದರಂತೆ ಉಡುಪಿ ಹಾಗೂ ಮಂಗಳೂರಿಗೆ ಪ್ರತೀ ಹತ್ತು ನಿಮಿಷಗಳಿಗೆ ಒಂದರಂತೆ ಸುಬ್ರಹ್ಮಣ್ಯಕ್ಕೆ ಬಸ್ ಸಂಚರಿಸುತ್ತವೆ.
ಇನ್ನು ಪ್ರತಿ ವರ್ಷ ಲಕ್ಷ ದೀಪೋತ್ಸವ ಸಂದರ್ಭ ಧರ್ಮಸ್ಥಳ ಘಟಕವೊಂದರಲ್ಲೇ ಕನಿಷ್ಠ 50 ಹೆಚ್ಚುವರಿ ಬಸ್ ನಿಯೋಜಿಸಲಾಗುತ್ತಿದ್ದು, ಮಡಿಕೇರಿ, ಪುತ್ತೂರು, ಬಿ.ಸಿ. ರೋಡ್, ಸುಳ್ಯ ವ್ಯಾಪ್ತಿಗೆ ಪ್ರತೀ ನಿತ್ಯ 30 ಟ್ರಿಪ್ ಇರುತ್ತಿದ್ದವು. ರಾಜಹಂಸ ಬಸ್ಗಳ 10 ಟ್ರಿಪ್ಗಳನ್ನೂ ಕಡಿತ ಮಾಡಲಾಗಿದೆ. ಲಕ್ಷದೀಪೋತ್ಸವ ಸಂದರ್ಭ ಸರಾಸರಿ ಪ್ರತೀ ದಿನ 20ರಿಂದ 22 ಲಕ್ಷ ರೂ. ಆದಾಯ ಬರುತ್ತಿತ್ತು. ಪ್ರಸಕ್ತ ಆರಂಭದ ಎರಡು ದಿನ 10 ಲಕ್ಷ ರೂ. ದಾಟಿಲ್ಲ. ಮುಷ್ಕರದಿಂದಾಗಿ ಬೆರಳೆಣಿಕೆಯ ಬಸ್ಗಳು ಮಾತ್ರ ಓಡಾಟ ನಡೆಸಿವೆ. ಇದರಿಂದ ಲಕ್ಷಾಂರ ರೂ.ಆದಾಯ ಕಳೆದುಕೊಂಡಿದೆ.
ಶುಕ್ರವಾರ ಮುಷ್ಕರವಿದ್ದರು ಕೆಲವು ಬಸ್ಗಳು ಸಂಚರಿಸಿದ್ದವು. ಆದರೆ ಶನಿವಾರ ಎಲ್ಲ ಸಿಬಂದಿಯೂ ಮುಷ್ಕರವನ್ನು ಬೆಂಬಲಿಸಿದ್ದರಿಂದ ಧರ್ಮಸ್ಥಳ ಘಟಕದಲ್ಲಿ 140 ಬಸ್ಗಳ ಪೈಕಿ 100 ನಿಲ್ದಾಣದಲ್ಲೇ ಉಳಿದಿದ್ದವು. ಪ್ರಯಾಣಿಕರ ಅನಿವಾರ್ಯತೆಯನ್ನು ಪರಿಗಣಿಸಿ ಧರ್ಮಸ್ಥಳ- ಮಂಗಳೂರು ನಡುವೆ 10 ಬಸ್ ಗಳು ಸಂಚಾರ ನಡೆಸಿದ್ದವು ಎಂದು ಅಧಿಕಾರಿ ತಿಳಿಸಿದ್ದಾರೆ.
ಅನೇಕ ಸಿಬಂದಿ ಮುಷ್ಕರ ಬೆಂಬಲಿಸಿ ಧರ್ಮಸ್ಥಳದಲ್ಲೇ ಉಳಿದಿದ್ದು, ಅವರೇ ಊಟ, ಉಪಾಹಾರ ವ್ಯವಸ್ಥೆಯನ್ನು ಡಿಪ್ಪೋದಲ್ಲಿ ಮಾಡಿಕೊಂಡರು. ಉಳಿದ ಪ್ರಯಾಣಿಕರಿಗೂ ಆಹಾರದ ವ್ಯವಸ್ಥೆ ಮಾಡಿದರು.