ಸುಬ್ರಹ್ಮಣ್ಯ, ಡಿ.13 (DaijiworldNews/PY): ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈಗ ಷಷ್ಠಿ ಉತ್ಸವದ ಸಂಭ್ರಮ. ಈ ವೇಳೆ ದೇಶದೆಲ್ಲೆಡೆಯಿಂದ ಲಕ್ಷಾಂತರ ಭಕ್ತಾಧಿಗಳು ಇಲ್ಲಿಗೆ ಆಗಮಿಸುತ್ತಾರೆ . ಹಲವಾರು ವೈಶಿಷ್ಠ್ಯಗಳನ್ನು ಹೊಂದಿರುವ ಸುಬ್ರಹ್ಮಣ್ಯಕ್ಕೆ ಭಕ್ತರಂತೆ ಮೀನುಗಳು ಜಾತ್ರೆ ನೋಡಲು ಬರುವುದು ಇಲ್ಲಿನ ವೈಶಿಷ್ಟ್ಯವಾಗಿದೆ.





ಇಲ್ಲಿ ಸುಬ್ರಹ್ಮಣ್ಯ ಸ್ವಾಮಿಯೇ ಪ್ರಮುಖ ಆರಾಧ್ಯ ಮೂರ್ತಿ. ಪ್ರತಿನಿತ್ಯ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಪ್ರತಿವರ್ಷ ಚಂಪಾಷಷ್ಠಿಯಂದು ಇಲ್ಲಿ ನಡೆಯುವ ಜಾತ್ರೋತ್ಸವಕ್ಕೆ ಲಕ್ಷಾಂತರ ಮಂದಿ ಭಕ್ತಾಧಿಗಳು ಆಗಮಿಸುತ್ತಾರೆ. ಅಲ್ಲದೇ, ಇಲ್ಲಿನ ವೈಭವದಕ್ಕೆ ಸಾಕ್ಷಿಯಾಗುತ್ತಾರೆ. ಹಲವಾರು ಪವಾಡಗಳು ನಡೆಯುವ ಈ ಪುಣ್ಯ ಸ್ಥಳದಲ್ಲಿ ಜಾತ್ರೆಯ ವೇಳೆ ದೇವಸ್ಥಾನದ ಕುಮಾರಧಾರ ಸ್ನಾನ ಘಟ್ಟಕ್ಕೆ ಮೀನುಗಳು ಅತಿಥಿಗಳಾಗಿ ಬರುವುದು ಅವುಗಳಲ್ಲಿ ಒಂದು.
ದೇವಾಲಯದಲ್ಲಿ ಜಾತ್ರೆಯ ವೇಳೆ ದ್ವಾದಶಿಯಂದು ಕೊಪ್ಪರಿಗೆ ಏರುವ ದಿನದಂದು ಏನೆಕಲ್ಲು- ಶ೦ಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಮೀನುಗಳು ಇಲ್ಲಿಗೆ ಬರುತ್ತವೆ. ಇಲ್ಲಿನ ಜಾತ್ರೆ ಮುಗಿಯುವವರೆಗೂ ಮೀನುಗಳು ಜಾತ್ರೋತ್ಸವದ ಕೊನೆಯ ದಿನ ನಡೆಯುವ ದೈವದ ಕೋಲದ ನಂತರ ತಮ್ಮ ಸ್ವಸ್ಥಾನಕ್ಕೆ ವಾಪಾಸ್ಸಾಗುತ್ತವೆ. ದೈವವು ಬಂದು ನದಿಗೆ ನೈವೇದ್ಯ ಹಾಕಿದ ನಂತರ ನೈವೇದ್ಯವನ್ನು ತಿಂದು ಮೀನುಗಳು ಮರಳುತ್ತವೆ. ದೇವರ ಮೀನುಗಳು ಎಂದು ಕರೆಯಲ್ಪಡುವ ಇವುಗಳನ್ನು ಯಾರೂ ಕೂಡಾ ಹಿಡಿಯುವಂತಿಲ್ಲ.
ಈ ಬಾರಿ ಕುಮಾರಧಾರ ಸ್ನಾನಘಟ್ಟದಲ್ಲಿ ನೀರಿನ ಹರಿವು ಸ್ವಲ್ ಕಡಿಮೆಯಾಗಿದ್ದು, ಈ ಕಾರಣದಿಂದ ಮೀನುಗಳ ಸಂಖ್ಯೆಯೂ ಕೂಡಾ ಕಡಿಮೆಯಾಗಿದೆ. ಈ ಸಮಯದಲ್ಲಿ ಸ್ನಾನಘಟ್ಟದ ಬಳಿ ಹೆಚ್ಚಿನ ಭಕ್ತಾಧಿಗಳು ಸೇರುವ ಕಾರಣ ಭಕ್ತಾಧಿಗಳು ನೀಡುವ ಆಹಾರಕ್ಕಾಗಿ ಮೀನುಗಳು ಸ್ನಾನಘಟ್ಟದ ಬಳಿ ಅಲೆಯುತ್ತಿರುತ್ತವೆ.
ಸ್ನಾನಘಟ್ಟದ ಬಳಿ ಸಾಕಷ್ಟು ಹೂಳು ತುಂಬಿಕೊಂಡಿರುವ ಕಾರಣ ಹೆಚ್ಚಿನ ಭಕ್ತಾಧಿಗಳಿಗೆ ಈ ಬಾರಿ ತೀರ್ಥಸ್ನಾನ ಮಾಡಲು ಕೂಡಾ ಅನಾನುಕೂಲವಾಗುತ್ತಿದೆ.
ಜಾತ್ರೆಯ ರಥೋತ್ಸವದ ಮಾರನೇ ದಿನ ದೇವರ ಅವಭೃತೋತ್ಸವ ಕುಮಾರಧಾರ ನದಿಯಲ್ಲಿ ನಡೆಯಲಿದೆ. ಆದರೆ, ಇಲ್ಲಿಯವರೆಗೂ ಸ್ನಾನಘಟ್ಟದ ಹೂಳು ತೆಗೆಯುವ ಕೆಲಸ ಇನ್ನೂ ಆಗಿಲ್ಲ. ಅಲ್ಲದೇ, ಭಕ್ತರ ಈ ಅನಾನುಕೂಲತೆಯ ಹಿನ್ನೆಲೆ ಮೀನುಗಳಿಗೂ ಕೂಡಾ ಯಾವುದೇ ತೊಂದರೆ ಆಗದಿರಲಿ ಎನ್ನುವುದು ಸ್ಥಳೀಯರ ಕಾಳಜಿ.