ಕಾಸರಗೊಡು, ಡಿ.13 (DaijiworldNews/PY): ಡಿ.14ರ ಸೋಮವಾರದಂದು ನಡೆಯಲಿರುವ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗೆ ಜಿಲ್ಲೆಯಲ್ಲಿ ಸಿದ್ಧತೆ ಪೂರ್ಣಗೊಂಡಿದ್ದು, ಮತದಾನಕ್ಕಿರುವ ಮತಯಂತ್ರ ಹಾಗೂ ಸಾಮಾಗ್ರಿಗಳನ್ನು ಮತಗಟ್ಟೆಗೆ ತಲುಪಿಸಲಾಗಿದೆ.



























ಜಿಲ್ಲೆಯ 9 ಕೇಂದ್ರಗಳಲ್ಲಿ ಇಂದು ಬೆಳಿಗ್ಗೆಯಿಂದ ಮತಗಟ್ಟೆಗಳಿಗಿರುವ ಸಾಮಗ್ರಿಗಳಗಳನ್ನು ವಿತರಿಸಲಾಯಿತು.
ಮತದಾನ ಡಿ.14ರ ಬೆಳಿಗ್ಗೆ 7 ರಿಂದ 6 ಗಂಟೆ ತನಕ ನಡೆಯಲಿದೆ. ಕೊರೊನಾ ಮಾನದಂಡದಂತೆ ಚುನಾವಣೆ ನಡೆಯಲಿದೆ. ಜಿಲ್ಲೆಯಲ್ಲಿ 1,409 ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ . ಜಿಲ್ಲಾ ಪಂಚಾಯತ್ನ 17 ಡಿವಿಝನ್, 38 ಗ್ರಾಮ ಪಂಚಾಯತ್, 6 ಬ್ಲಾಕ್ ಪಂಚಾಯತ್, ಮೂರು ನಗರಸಭೆಗಳಿಗೆ ಚುನಾವಣೆ ನಡೆಯಲಿದೆ. ಫಲಿತಾಂಶ 16 ರಂದು ಹೊರ ಬೀಳಲಿದೆ.
ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಚುನಾವಣೆಯಾಗಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್, ಸಿಪಿಐ ಎಂ ನೇತೃತ್ವದ ಎಲ್ಡಿಎಫ್ಟ್ಟಿ, ಬಿಜೆಪಿ ಹಾಗೂ ಎಸ್ಡಿಪಿಪಿಐ, ಪಿಡಿಪಿ ಸೇರಿದಂತೆ ಸಣ್ಣಪಕ್ಷಗಳು ಅಲ್ಲದೆ ಪಕ್ಷೇತರರು ನಿರ್ಣಾಯಕವಾಗಿದ್ದಾರೆ.
38 ಗ್ರಾಮ ಪಂಚಾಯತ್ಗಳ ಪೈಕಿ 19 ಯುಡಿಎಫ್ ಮತ್ತು 15 ಎಲ್ಡಿಎಫ್ ಕೈವಶದಲ್ಲಿದೆ. ಎರಡು ಗ್ರಾಮ ಪಂಚಾಯತ್ಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೆ. ಕಾಂಗ್ರೆಸ್ ಬಂಡಾಯ ಗುಂಪು ಒಂದು ಗ್ರಾಮ ಪಂಚಾಯತ್ನಲ್ಲಿ ಈಗ ಆಡಳಿತ ನಡೆಸುತ್ತಿದೆ. ಬಿಜೆಪಿ ಮಧೂರು ಮತ್ತು ಬೆಳ್ಳೂರು ಗ್ರಾಮ ಪಂಚಾಯತ್ನಲ್ಲಿ ಮಾತ್ರ ಅಧಿಕಾರದಲ್ಲಿದೆ. ಜಿಲ್ಲಾ ಪಂಚಾಯತ್ನ 17 ವಾರ್ಡ್ಗಳಲ್ಲಿ ಯುಡಿಎಫ್ 8, ಎಲ್ಡಿಎಫ್ 7 ಹಾಗೂ ಬಿಜೆಪಿ ಎರಡು ಸ್ಥಾನಗಳನ್ನು ಪಡೆದಿದೆ.
ಆರು ಬ್ಲಾಕ್ ಪಂಚಾಯತ್ಗಳ ಪೈಕಿ ಎಲ್ಡಿಎಫ್ ಮತ್ತು ಯುಡಿಎಫ್ ತಲಾ ಮೂರರಲ್ಲಿ ಅಧಿಕಾರದಲ್ಲಿದೆ. ನಗರಸಭೆ ಗಳ ಪೈಕಿ ಎರಡು ಎಲ್ಡಿಎಫ್ ಮತ್ತು ಒಂದು ಯುಡಿಎಫ್ ಅಧಿಕಾರದಲ್ಲಿದೆ. ನೀಲೇಶ್ವರ ಮತ್ತು ಕಾಞಂಗಾಡ್ ಎಲ್ಡಿಎಫ್ ಮತ್ತು ಕಾಸರಗೋಡು ಯುಡಿಎಫ್ ಆಡಳಿತ ನಡೆಸುತ್ತಿದೆ. ಒಟ್ಟು 2648 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜಿಲ್ಲಾ ಪಂಚಾಯತ್ನ 17 ವಾರ್ಡ್ಗಳಿಗೆ 65, 3 ನಗರಸಭೆಗಳ 113 ವಾರ್ಡ್ಗಳಿಗೆ 329, ಆರು ಬ್ಲಾಕ್ ಪಂಚಾಯತ್ಗಳ 83 ವಾರ್ಡ್ಗಳಿಗೆ 263 ಅಭ್ಯರ್ಥಿಗಳು ಹಾಗೂ 38 ಗ್ರಾಮ ಪಂಚಾಯತ್ಗಳ 664 ವಾರ್ಡ್ಗಳಿಗೆ 1991 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 1287 ಮಹಿಳಾ ಅಭ್ಯರ್ಥಿಗಳಾಗಿದ್ದಾರೆ. 10, 48, 566 ಮತದಾರರು ತಮ್ಮ ಹಕ್ಕು ಚಲಾಯಿಸುವರು. 71 ಅನಿವಾಸಿ ಭಾರತೀಯರ ಮತ ದಾರರಿದ್ದಾರೆ.
ಡಿ.12 ರಂದು 6 ಗಂಟೆಯಿಂದ 14 ರ ಸಂಜೆ 6 ಗಂಟೆ ತನಕ ಹಾಗೂ ಮತ ಎಣಿಕೆ ದಿನವಾದ ಡಿ.16ರಂದು ಜಿಲ್ಲೆಯಲ್ಲಿ ಮದ್ಯ ನಿಷೇಧ ಜಾರಿಗೆ ತರಲಾಗಿದೆ.
ಕೊರೊನಾ ರೋಗಿಗಳು ಹಾಗೂ ಕ್ವಾರಂಟೈನ್ನಲ್ಲಿರುವವರಿಗೆ ಅಂಚೆ ಮತದಾನದ ವ್ಯವಸ್ಥೆಯನ್ನು ಈಗಾಗಲೇ ಮಾಡಲಾಗಿದೆ. ಡಿ . 13 ರ ಸಂಜೆ 3 ಗಂಟೆ ತನಕ ದ ಲಿಸ್ಟ್ ನಂತೆ ಸೋಂಕಿತರಿಗೆ ಈ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಇದಕ್ಕಾಗಿ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ನಂತರ ಸೋಂಕಿತರು ಧೃಢಪಟ್ಟಲ್ಲಿ ಅವರಿಗೆ ಮತದಾನದ ದಿನ ಸಂಜೆ 5 ರಿಂದ 6 ಗಂಟೆ ತನಕ ಕೊರೊನಾ ಮಾನದಂಡ ಹಾಗೂ ಸುರಕ್ಷತೆ ಪಾಲಿಸಿ ಮತದಾನ ಮಾಡಲು ಅವಕಾಶ ನೀಡಲಾಗಿದೆ.
ಕೊರೊನಾ ಹಿನ್ನಲೆಯಲ್ಲಿ ಮತಗಟ್ಟೆಗಳಿಗೆ 9863 ಲೀಟರ್ ಸಾನಿಟೈಸರ್, ಮಾಸ್ಕ್, ಗ್ಲೌಸ್, ಫೇಸ್ ಶೀಲ್ಡ್ ಮೊದಲಾದವುಗಳನ್ನು ಮತಗಟ್ಟೆಗೆ ಸಜ್ಜುಗೊಳಿಸಲಾಗಿದೆ. ಚುನಾವಣಾ ಕರ್ತವ್ಯಕ್ಕೆ 8527 ಸಿಬ್ಬಂದಿಗಳನ್ನು ನೇಮಿಸಲಾಗಿದೆ.
ಅಕ್ರಮ ಮದ್ಯ , ಹೊರ ರಾಜ್ಯಗಳಿಂದ ಅಕ್ರಮ ಪ್ರವೇಶ ಹಾಗೂ ಇನ್ನಿತರ ಅಕ್ರಮ ತಡೆಗಟ್ಟಲು ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ತಪಾಸಣೆ ಚುರುಕುಗೊಳಿಸಲಾಗಿದೆ. ಕೇರಳ - ಕರ್ನಾಟಕ ನಡುವೆ
17 ರಸ್ತೆ ಸೇರಿದಂತೆ 38 ದಾರಿಗಳನ್ನು ಗುರುತಿಸಲಾಗಿದೆ. ಈ ರಸ್ತೆಗಳಲ್ಲಿ ತಪಾಸಣೆ ನಡೆಸಲಾಗುವುದು. ಸಮುದ್ರ ಮೂಲಕ ಅಕ್ರಮ ಸಾಗಾಟ, ನುಸುಳುವಿಕೆ ತಡೆಗಟ್ಟಲು ಕರಾವಳಿ ಪೊಲೀಸರು ನಿಗಾ ಇರಿಸಲಿದ್ದಾರೆ. ಮೂರು ಕರಾವಳಿ ಠಾಣಾ ಪೊಲೀಸರು ತೀರ ಹಾಗೂ ಸಮುದ್ರದಲ್ಲಿ ನಿಗಾ ಹಾಗೂ ಗಸ್ತು ತಿರುಗುತ್ತಿದ್ದಾರೆ.
ಜಿಲ್ಲೆಯಲ್ಲಿ 84 ಅತೀ ಸೂಕ್ಷ್ಮ ಮತಗಟ್ಟೆಗಳಿದ್ದು, 43 ಸೂಕ್ಷ್ಮ ಮತಗಟ್ಟೆಗಳಿವೆ. 8 ನಕ್ಸಲ್ ಭೀತಿಯ ಮತಗಟ್ಟೆಗಳಿವೆ. ಜಿಲ್ಲೆಯಲ್ಲಿ ಒಟ್ಟು 400 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಅಥವಾ ಚಿತ್ರೀಕರಣಕ್ಕೆ ವ್ಯವಸ್ಥೆ ಮಾಡಲಾಗಿದೆ.
ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗೆ ಮತ ಚಲಾಯಿಸಲು ಹೊರ ರಾಜ್ಯಗ ಳಿಂದ ಆಗಮಿಸುವರು ಕೊರೊನಾ ಟೆಸ್ಟ್ ನಡೆಸಬೇಕಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸ್ಪಷ್ಟಪಡಿಸಿದ್ದಾರೆ.
ಕೊರೊನಾ ಟೆಸ್ಟ್ ನಡೆಸಿ ಆಗಮಿಸಬೇಕು ಎಂದು ಜಿಲ್ಲಾಧಿಕಾರಿ ಶುಕ್ರವಾರ ಮನವಿ ಮಾಡಿದ್ದರು. ಆದರೆ ರಾಜಕೀಯ ಪಕ್ಷಗಳು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಕೊರೊನಾ ಟೆಸ್ಟ್ ಕಡ್ಡಾಯ ಮಾಡದಿರಲು ತೀರ್ಮಾನಿಸಲಾಗಿದೆ.
ಆಂಟಿಜನ್ ಟೆಸ್ಟ್ ನಡೆಸಲಾಗಿದೆಯೇ ಎಂಬ ಬಗ್ಗೆ ತಪಾಸಣೆ ನಡೆಸಲು ಯಾರಿಗೂ ಜವಾಬ್ದಾರಿ ನೀಡಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.