ಕಾರ್ಕಳ, ಡಿ. 13 (DaijiworldNews/SM): ಕಳವುಗೈದ ಹಸುಗಳನ್ನು ವಧಿಸಿ ಅದರ ಮಾಂಸ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ನಗರ ಠಾಣಾ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದ ಬಜರಂಗದಳ ಕಾರ್ಕಳ ನಗರ ಘಟಕದ ಮಾಜಿ ಸಂಚಾಲಕ ಅನಿಲ್ ಪ್ರಭು ನನ್ನು ಬಂಧಿಸಿದ್ದಾರೆ.

ನವಂಬರ್ 6ರಂದು ಕಾರ್ಕಳ ನಗರದ ಬಂಗ್ಲೆಗುಡ್ಡೆ ಜಂಕ್ಷನ್ ಬಳಿಯಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸಿದಾಗ ಹುಡ್ಕೋ ಕಾಲನಿಯ ಮೊಹಮ್ಮದ್ ಯಾಸೀನ್ ಎಂಬಾತನು ಬಂಗ್ಲೆಗುಡ್ಡೆಯಿಂದ ನಕ್ರೆ ಜಂಕ್ಷನ್ ಕಡೆಗೆ ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಸಂದರ್ಭ ಪೊಲೀಸರು ವಾಹನ ನಿಲ್ಲಿಸಲು ಹೇಳಿದ್ದಾರೆ. ಆದರೆ, ಈ ಸಂದರ್ಭ ಆತ ತಪ್ಪಿಸಿಕೊಂಡಿದ್ದು, ಅರ್ಧದಲ್ಲಿ ವಾಹನ ಬಿಟ್ಟು ಪರಾರಿಯಾಗಿದ್ದ. ವಾಹನ ಪರಿಶೀಲನೆ ನಡೆಸಿದ ಸಂದರ್ಭ ಪ್ಲಾಸ್ಟಿಕ್ ಚೀಲದ ಒಳಗೆ ದನದ ತಲೆ, ದನದ ಮಾಂಸ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹುಡ್ಕೋ ಕಾಲನಿಯ ಮೊಹಮ್ಮದ್ ಯಾಸೀನ್ , ಜಯಂತಿನಗರದ ಜೀರ್ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ಪಾಲು ಪಡೆಯುತ್ತಿದ್ದ ಅನಿಲ್ ಪ್ರಭು!
ಸಾರ್ವಜನಿಕ ಸ್ಥಳಗಳಲ್ಲಿ ಮಲಗುತ್ತಿದ್ದ ದನಗಳನ್ನು ಕಳವುಗೈದು ವಧಿಸಿ ಮಾಂಸ ಮಾರಾಟ ಜಾಲಕ್ಕೆ ಬೆನ್ನೆಲುಬಾಗಿದ್ದವನು ತೆಳ್ಳಾರು ರಸಯ ನಿವಾಸಿ ಅನಿಲ್ ಪ್ರಭು. ವಿಷ ಪೂರಿತ ಉರಗ ಹಿಡಿದು ಸಾರ್ವಜನಿಕರಿಂದ ಪ್ರಶಂಸೆಗೂ ಪಾತ್ರನಾಗಿದ್ದ ಈತ ಬಜರಂಗ ದಳದ ಕಾರ್ಕಳ ನಗರ ಸಂಚಾಲಕರನಾಗಿ ಗುರುತಿಸಿಕೊಂಡಿದ್ದ.
ದನಗಳನ್ನು ಕಳವುಗೈದು ವಧಿಸಿ ಮಾಂಸ ಮಾರಾಟ ಜಾಲದವರಿಗೆ ಅಭಯವಾಗಿದ್ದ ಅನಿಲ್ ಪ್ರಭು, ಪೊಲೀಸರಿಂದ ಯಾವುದೇ ರೀತಿ ತೊಂದರೆಯಾಗದಂತೆ ನಾನಿದ್ದೇನೆ ಎಂದು ವಾಗ್ದಾನ ನೀಡಿ ಅವರಿಂದ ಪಾಲು ಪಡೆಯುತ್ತಿದ್ದನೆಂದು ತನಿಖೆಯ ವೇಳೆಗೆ ಹುಡ್ಕೋ ಕಾಲನಿಯ ಮೊಹಮ್ಮದ್ ಯಾಸೀನ್ ಪೊಲೀಸರಲ್ಲಿ ಬಾಯಿ ಬಿಟ್ಟಿದ್ದಾನೆ. ಅದರನ್ವಯ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿಲ್ ಪ್ರಭುನನ್ನು ಬಂಧಿಸಿದ್ದಾರೆ.