ಸುಳ್ಯ, ಜೂ16: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗ್ರಾಮವೊಂದರಲ್ಲಿ ಮತ್ತೆ ನಕ್ಸಲರು ಪ್ರತ್ಯಕ್ಷರಾಗಿದ್ದಾರೆ ಎನ್ನುವ ಮಾಹಿತಿ ಸ್ಥಳೀಯರಿಂದ ಲಭ್ಯವಾಗಿದೆ.
ನಿನ್ನೆ ರಾತ್ರಿ ಸುಳ್ಯದ ಮಡಪ್ಪಾಡಿಯ ಸಮೀಪದ ಹಾಡಿಕಲ್ಲು ಎಂಬಲ್ಲಿ ನಕ್ಸಲರು ಪ್ರತ್ಯಕ್ಷರಾದ ಬಗ್ಗೆ ಸ್ಥಳಿಯರಿಂದ ಮಾಹಿತಿ ಲಭ್ಯವಾಗಿದ್ದು, ಮತ್ತೆ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ಸುಳ್ಯ ಸಮೀಪದ ಹಾಡಿಕಲ್ಲಿನ ಜಯರಾಮ ಎಂಬವರ ತೋಟದ ಬಳಿ ಇರುವ ತಾತ್ಕಾಲಿಕ ಮನೆಗೆ ಮೂವರು ನಕ್ಸಲರು ನಡೆದುಕೊಂಡು ಹೋಗಿರುವುದನ್ನು ಗ್ರಾಮಸ್ಥರು ನೋಡಿದ್ದಾರೆ. ಮೂವರಲ್ಲಿ ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷ ಎಂದು ಸ್ಥಳಿಯರು ಗುರುತಿಸಿದ್ದಾರೆ.
ಈ ಬಗ್ಗೆ ಸುಳ್ಯ ಠಾಣಾ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ.
ದಕ್ಷಿಣ ಕನ್ನಡ ಹಾಗೂ ಕೊಡಗಿನ ಗಡಿಪ್ರದೇಶದಲ್ಲಿ ಕಳೆದ ಮೂರು ತಿಂಗಳ ಹಿಂದೆ ನಕ್ಸಲರು ಪ್ರತ್ಯಕ್ಷರಾಗಿದ್ದರು. ಈ ವೇಳೆ ನಕ್ಸಲ್ ನಿಗ್ರಹ ದಳವು ಸುಳ್ಯ ಹಾಗೂ ಕೊಡಗಿನ ಕೆಲವು ಪ್ರದೇಶಗಳಲ್ಲಿ ಕೂಂಬಿಂಗ್ ನಡೆಸಿದ್ದರು.