ಬೆಂಗಳೂರು, ಜೂ16: ಪತ್ರಕರ್ತೆ ಗೌರಿಲಂಕೇಶ್ ಹತ್ಯೆಯಲ್ಲಿ ಶ್ರೀರಾಮಸೇನೆಯ ಯಾವುದೇ ಕೈವಾಡವಿಲ್ಲ. ನಮ್ಮ ಹೋರಾಟ ಶಾರೀರಿಕ ಸಂಘರ್ಷವಲ್ಲ, ವೈಚಾರಿಕ ಸಂಘರ್ಷವಷ್ಟೇ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ ಹಿಂದೂ ಸಂಘಟನೆಯ ಕೈವಾಡ ಇರುವುದನ್ನು ತಳ್ಳಿ ಹಾಕಿದರು. ಗೌರಿ ಹತ್ಯೆಯನ್ನು ಖಂಡಿಸುತ್ತೇವೆ. ಹಿಂದೂ ಧರ್ಮದ ವಿರೋಧಿಯಾಗಿದ್ದ ಗೌರಿ ಅವರನ್ನು ಹತ್ಯೆ ಮಾಡುವಷ್ಟು ಕೀಳುಮಟ್ಟಕ್ಕೆ ಹಿಂದೂ ಪರ ಸಂಘಟನೆಗಳು ಇಳಿಯುವುದಿಲ್ಲ. ಆದರೆ ಈ ವಿಚಾರದಲ್ಲಿ ಸುಮ್ಮನೆ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಎಳೆದು ತರುತ್ತಿದ್ದಾರೆ ಎಂದು ಹೇಳಿದ್ದಾರೆ.
ಗೌರಿ ಹತ್ಯೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ನವೀನ್, ಪುರುಷೋತ್ತಮ್ ಸೇರಿದಂತೆ ಯಾರೂ ಸಹ ಶ್ರೀರಾಮ ಸೇನೆಯ ಕಾರ್ಯಕರ್ತರಲ್ಲ. ಬಂಧನವಾಗಿರುವ ನವೀನ್ ಮದ್ದೂರಿನವರಾಗಿದ್ದು, ಮದ್ದೂರಿನಲ್ಲಿ ಶ್ರೀರಾಮಸೇನೆಯ ಸಂಘಟನೆಯೇ ಇಲ್ಲ ಎಂದು ಮುತಾಲಿಕ್ ತಿಳಿಸಿದರು.
ಮುತಾಲಿಕ್, ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳುವಾಗ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯಕರ್ತರನ್ನು ಕುಶಲ ವಿಚಾರಿಸಿ ಮಾತನಾಡಿಕೊಂಡು ಹೋಗುವುದು ನನ್ನ ಅಭ್ಯಾಸ. ಆ ವೇಳೆ ಸಾಕಷ್ಟು ಮಂದಿ ಅಭಿಮಾನಿಗಳು ಫೋಟೊ ತೆಗೆಸಿಕೊಳ್ಳುತ್ತಾರೆ. ಹಾಗಂತ ನನ್ನ ಜೊತೆ ಫೋಟೊ ತೆಗಸಿಕೊಂಡವರೆಲ್ಲ ಶ್ರೀರಾಮಸೇನೆಯ ಕಾರ್ಯಕರ್ತರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಮಾನವೀಯ ಹತ್ಯೆಗೆ ಸಂಬಂಧಿಸಿದಂತೆ ಅಪರಾಧಿಗಳಿಗೆ ಶಿಕ್ಷೆಯಾಗಲೇಬೇಕು ಎಂದು ಹೇಳಿದ ಅವರು, ಮುಸ್ಲಿಂ, ಕ್ರಿಶ್ಚಿಯನ್,ಮಾವೊವಾದಿ, ನಕ್ಸಲೀಯರಂತಹ ಉಗ್ರ ಸಂಘಟನೆಗಳಲ್ಲಿ ಪೈಶಾಚಿಕ ಹತ್ಯೆಗಳನ್ನು ಮಾಡಲು ತರಬೇತಿ ನೀಡಲಾಗುತ್ತದೆ. ಅಂತಹ ಹೃದಯಹೀನ ಕಾರ್ಯಗಳನ್ನು ಹಿಂದೂ ಸಂಘಟನೆಗಳು ಮಾಡಲು ಬಯಸುವುದೂ ಇಲ್ಲ ಎಂದು ಹೇಳಿದರು.