ಬೆಂಗಳೂರು, ಜೂ 17 : ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಲು ಆರೋಪಿಗಳು, ‘ಆಪರೇಷನ್ ಆಯಿ(ಅಮ್ಮ)’ ಕೋಡ್ ವರ್ಡ್ ನಲ್ಲಿ ಸಂಚು ರೂಪಿಸಿದ್ದರು. ಪ್ರಕರಣದ ಆರೋಪಿಗಳಾದ ಮಹಾರಾಷ್ಟ್ರದ ಅಮೋಲ್ ಕಾಳೆ ಹಾಗೂ ವಿಜಯಪುರದ ಮನೋಹರ್ ದುಂಡಪ್ಪ ಯಡವೆ ಬಳಿ ಸಿಕ್ಕಿರುವ ಡೈರಿಗಳಲ್ಲಿದ್ದ ಕೋಡ್ವರ್ಡ್ಗಳ ಅರ್ಥವನ್ನು ಎಸ್ಐಟಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಇಬ್ಬರೂ ತಮ್ಮ ಡೈರಿಯಲ್ಲಿ ‘ಆಯಿ ಮಾರ್ ಡಾಲಾ’ ಎಂದು ಮರಾಠಿಯಲ್ಲಿ ಬರೆದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಪೊಲೀಸರಿಗೆ ಸಣ್ಣ ಸುಳಿವು ಕೂಡಾ ಸಿಗಬಾರದು ಎಂದು ಮುನ್ನೆಚ್ಚರಿಕೆ ವಹಿಸಿದ್ದ ಆರೋಪಿಗಳು, ಕೋಡ್ ವರ್ಡ್ ಮೂಲಕವೇ ಎಲ್ಲಾ ವಿಚಾರಗಳನ್ನು ವ್ಯವಹರಿಸುತ್ತಿದ್ದರು. ಎಸ್ ಐ ಟಿ ಅಧಿಕಾರಿಗಳು ಆರೋಪಿಗಳಿಂದ ವಶಕ್ಕೆ ಪಡೆದಿರುವ ಡೈರಿಯಲ್ಲಿ ಸಾಕಷ್ಟು ಕೋಡ್ ವರ್ಡ್ ಗಳು ಪತ್ತೆಯಾಗಿವೆ. ಇದರಲ್ಲಿ ಮುಖ್ಯವಾಗಿ ಗೌರಿ ಲಂಕೇಶ ಹತ್ಯೆಯನ್ನು ಆಪರೇಷನ್ ಅಮ್ಮ ಎಂಬ ಹೆಸರಿನಡಿ ಕಾರ್ಯಾಚರಣೆ ನಡೆಸಿದ್ದರು.
ಗೌರಿಗೆ ವಯಸ್ಸಾಗಿತ್ತು. ಬಿಳಿ ಕೂದಲಿತ್ತು. ಆಯಿ(ಅಮ್ಮ) ರೀತಿಯಲ್ಲೇ ಕಾಣಿಸುತ್ತಿದ್ದರು. ನಾವೆಲ್ಲರೂ ಆಯಿಯನ್ನು ಮುಗಿಸೋಣ ಅಂತಾನೇ ಅಂದು
ಕೊಂಡಿದ್ದೆವು. ಹೀಗಾಗಿ, ಅದೇ ಹೆಸರು ಸೂಕ್ತವೆನಿಸಿತು. ನಂತರ ನಾವೆಲ್ಲರೂ ಆಯಿ ಎಲ್ಲಿದ್ದಾಳೆ? ಆಯಿ ಮೇಲೆ ಕಣ್ಣಿಡಿ, ಆಯಿ ಮುಗಿಸುವ ಕಾಲ ಹತ್ತಿರ ಬಂತು ಎಂದೆಲ್ಲ ಮಾತನಾಡಿಕೊಳ್ಳುತ್ತಿದ್ದೆವು’ ಎಂದು ಆರೋಪಿಗಳು ಹೇಳಿರುವುದಾಗಿ ಅಧಿಕಾರಿ ವಿವರಿಸಿದರು.
ಗೌರಿ ಹತ್ಯೆಯ ಬಳಿಕ, ಸಾಹಿತಿ ಪ್ರೊ. ಕೆ.ಎಸ್.ಭಗವಾನ್ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ ಗಿರೀಶ್ ಕಾರ್ನಾಡ್ ಅವರನ್ನು ಸರದಿಯಲ್ಲಿ ಹತ್ಯೆ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು ಎಂದು ಅಧಿಕಾರಿ ವಿವರಿಸಿದರು.