ಪುತ್ತೂರು , ಜೂ 17: ಕೋಮುಗಲಭೆ ಕುಖ್ಯಾತಿಗೆ ಗುರಿಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸಾಮರಸ್ಯಕ್ಕೆ ಜ್ವಲಂತ ನಿದರ್ಶನ ಬೆಳಕಿಗೆ ಬಂದಿದೆ. ಪುತ್ತೂರಿನ ಕಬಕದ ವಿದ್ಯಾಪುರ ಜನವಸತಿ ಕಾಲನಿಯಲ್ಲಿ ಈ ಘಟನೆ ನಡೆದಿದೆ. ಹಿಂದೂ ಮಹಿಳೆಯ ಅಂತ್ಯಸಂಸ್ಕಾರಕ್ಕೆ ಸಂಬಂಧಿಕರು ಮುಂದೆ ಬರದಿದ್ದಾಗ ಮುಸ್ಲಿಂ ಯುವಕರು ಹಣ ಸಂಗ್ರಹಿಸಿ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದರು.
ಇಲ್ಲಿನ ಜನವಸತಿ ಕಾಲನಿಯಲ್ಲಿ ವಾಸವಿದ್ದ ಭವಾನಿ (52) ಎಂಬುವವರು ಅಕಾಲಿಕವಾಗಿ ನಿಧನರಾಗಿದ್ದರು. ಭವಾನಿ ಅವರು ತಮ್ಮ ಚಿಕ್ಕಪ್ಪನ ಪುತ್ರ ಕೃಷ್ಣ ಅವರೊಂದಿಗೆ ಹಲವಾರು ವರ್ಷಗಳಿಂದ ವಾಸವಾಗಿದ್ದು, ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದರು. ಆದರೆ, ನಿನ್ನೆ ಬೆಳಗ್ಗೆ ಹೃದಯಘಾತದಿಂದ ಭವಾನಿ ಅವರು ಮೃತಪಟ್ಟಾಗ ಶವದ ಅಂತ್ಯಸಂಸ್ಕಾರಕ್ಕೂ ಸಹೋದರ ಪುತ್ರ ಕೃಷ್ಣ ಅವರ ಬಳಿ ಹಣವಿರಲಿಲ್ಲ. ಸಂಬಂಧಿಕರಿಗೆ ವಿಷಯ ತಿಳಿಸಿದರೂ ಯಾರು ಬಂದಿರಲಿಲ್ಲ. ಹೀಗಾಗಿ ಮೃತದೇಹ ಮನೆಯಲ್ಲಿಯೇ ಉಳಿದಿತ್ತು.
ಕೊನೆಗೆ ಸ್ಥಳೀಯರಾಗಿರುವ ತನ್ನ ಮುಸ್ಲಿಂ ಸ್ನೇಹಿತರಲ್ಲಿ ವಿಷಯ ತಿಳಿಸಿ, ಅಂತ್ಯ ಸಂಸ್ಕಾರಕ್ಕೂ ಹಣವಿಲ್ಲ ಎಂದು ತಿಳಿಸಿದರು. ಯುವಕರು ಒಟ್ಟು ಸೇರಿ ಹಣ ಸಂಗ್ರಹಿಸಿ ಶವವನ್ನು ಮನೆಯಿಂದ ಹೊರಕ್ಕೆ ಒಯ್ದು ಹಿಂದೂ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನಡೆಸಿದ್ದಾರೆ. ಈ ಸಂದರ್ಭ ವಿಷಯ ತಿಳಿದ ಗ್ರಾಮ ಬೀಟ್ ಸಿಬ್ಬಂದಿಯೂ ಆದಾ ನಗರ ಠಾಣೆಯ ಮಂಜುನಾಥ್ ಅವರು ಬಂದು ಆರ್ಥಿಕ ಸಹಾಯ ನೀಡಿ ಯುವಕರ ಕಾರ್ಯಕ್ಕೆ ಕೈಜೋಡಿಸಿದರು.
ರಂಜಾನ್ ಸಂಭ್ರಮದ ನಡುವೆಯೂ ಮುಸ್ಲಿಮರು ಹಿಂದು ಮಹಿಳೆಯ ಶವವನ್ನು ಸ್ಮಶಾನಕ್ಕೆ ಹೊತ್ತೊಯ್ದು ಸಂಸ್ಕಾರ ನೆರವೇರಿಸಿದ್ದು, ಶ್ಲಾಘನೆಗೆ ಪಾತ್ರವಾಗಿದ್ದಲ್ಲದೆ ಕೋಮು ಸಾಮರಸ್ಯಕ್ಕೆ ನಿದರ್ಶನವಾಗಿದೆ.