ಉಡುಪಿ, ಡಿ.18 (DaijiworldNews/PY): ಹೊತ್ತು ಸಾಕಿ ಸಲುಹಿದ ಅಮ್ಮನ ಋಣ ತೀರಿಸಲು ಎಂದಿಗೂ ಸಾಧ್ಯವಿಲ್ಲ.. ಆದ್ರೆ ಹೆತ್ತಾಕೆಯ ನೆನಪಿಗಾಗಿ ಏನಾದರೂ ಮಾಡಬೇಕು ಅಂತ ಮಕ್ಕಳಿಗೆ ಇರೋ ಆಸೆ ಸಹಜ. ಹೀಗಾಗಿ ಹಿರಿಯ ಕಲಾವಿದರೊಬ್ಬರು ಗತಿಸಿದ ಅಮ್ಮನ ನೆನಪಿಗಾಗಿ ಆಕೆ ಮೂರ್ತಿ ನಿರ್ಮಾಣ ಮಾಡಿ, ಗುಡಿ ಕಟ್ಟಿ, ದಿನ ನಿತ್ಯ ಪೂಜೆ ಮಾಡಿ ಹೆತ್ತಾಕೆಯ ಆಶೀರ್ವಾದ ಪಡೆಯುತ್ತಿದ್ದಾರೆ.







ಜಗತ್ತಿನಲ್ಲಿ ಕೆಟ್ಟ ಮಕ್ಕಳಾದ್ರೂ ಇರಬಹುದು, ಕೆಟ್ಟ ಅಮ್ಮ ಇರೋದಕ್ಕೆ ಸಾಧ್ಯವಿಲ್ಲ. ಮಕ್ಕಳ ಪ್ರತಿಯೊಂದು ಹೆಜ್ಜೆಯಲ್ಲಿ ಒಳಿತನ್ನೇ ಬಯಸುವ ತಾಯಿ ಆಂದ್ರೆ ಪ್ರತಿ ಮಕ್ಕಳಿಗೂ ಇಷ್ಟನೇ. ಹೀಗಾಗಿ ತನ್ನ ಹೆತ್ತಾಕೆಗೂ ಏನಾದ್ರೂ ಕೊಡಬೇಕು ಅಂತ ಮಕ್ಕಳು ಆಸೆ ಪಡುವುದು ಸಹಜ. ಅದೇ ರೀತಿ ತಾಯಿಯನ್ನು ಪ್ರೀತಿಸುತ್ತಿದ್ದ ಹಿರಿಯ ನಟ, ನಿರ್ದೇಶಕ ನಿರ್ಮಾಪಕ ರಾಜಶೇಖರ ಕೋಟ್ಯಾನ್
ಆಕೆ ಗತಿಸಿದ ನಂತರವೂ ನೆನಪಿನಲ್ಲಿ ಉಳಿಯುವಂತೆ ಮಾಡಬೇಕು ಅಂತ ತಾಯಿ ದಿವಂಗತ ಕಲ್ಯಾಣಿ ಪೂಜಾರ್ತಿ ಅವರ ನೆನಪಿಗಾಗಿ ಹುಟ್ಟೂರು ಉಡುಪಿಯ ಸಾಂತೂರು ಗರಡಿ ಮನೆಯಲ್ಲಿ, ಸುಂದರವಾದ ಗುಡಿ ಕಟ್ಟಿ, ಮೂರ್ತಿ ನಿರ್ಮಿಸಿ ಮಂಗಳಾರತಿ ಬೆಳಗುತ್ತಿದ್ದಾರೆ.
ರಾಜಸ್ಥಾನ ಜೈಪುರ ವೈಟ್ ಮಾರ್ಬಲ್ನಲ್ಲಿ ರಾಜಸ್ಥಾನಿ ಕಲಾವಿದ ಪೃಥ್ವಿರಾಜ್ ಅವರಿಂದ ಏಕಶಿಲಾ ಮೂರ್ತಿ ಕೆತ್ತನೆ ಕೆಲಸ ಮಾಡಿದ್ದಾರೆ. ಒಟ್ಟು ಆರು ತಿಂಗಳ ಕಾಲ ಲಕ್ಷಾಂತರ ರೂ ಖರ್ಚು ಮಾಡಿ ಈ ಮೂರ್ತಿಯನ್ನು ರಾಜಸ್ಥಾನದಲ್ಲಿ ನಿರ್ಮಿಸಿ ಊರಿಗೆ ತರಿಸಿಕೊಂಡಿದ್ದಾರೆ.
ಮೊದಲು ತಾಯಿಯ ಪೋಟೋ ಕೊಟ್ಟು ಪೋಟೋದಲ್ಲಿ ಇದ್ದ ಹಾಗೆ ಮೂರ್ತಿ ನಿರ್ಮಾಣ ಮಾಡಿದ್ದಾರೆ. ಮೂರ್ತಿಯೂ ನೋಡುವುದಕ್ಕೂ ತಾಯಿಯಂತೆ ಇದ್ದು, ಮೂರ್ತಿ ನೋಡಿದರೆ ತಾಯಿ ನೋಡಿದಷ್ಟೇ ಖುಷಿ ಆಗುತ್ತೆ ಎನ್ನುವುದು ರಾಜಶೇಖರ್ ಖುಷಿಯಿಂದ ಅವರ ಮಾತು. ಪ್ರತಿ ದಿನ ಮೂರ್ತಿಗೆ ಪೂಜೆ ಮಾಡಿ ಹೋದರೆ ಮನಸ್ಸಿಗೆ ನೆಮ್ಮದಿ, ಸಂತೋಷ ಎಂದಿದ್ದಾರೆ.