ಬೆಂಗಳೂರು, ಜೂ 18 : ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಬುದ್ಧಿಜೀವಿಗಳು, ಜಾತ್ಯತೀತರು ಮತ್ತು ಪ್ರಗತಿಪರರ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ. ಹಿಂದುತ್ವಕ್ಕೆ ಒಂದು ಪರಿಭಾಷೆ ಕೊಡುವ ಮೂಲಕ ಯಾವ ವಿಚಾರವಾದಿಗಳು ತಮ್ಮ ಮೂರ್ಖತನವನ್ನು ಬಿಚ್ಚಿಡುತ್ತಾರೋ ಅಂಥ ಮೂರ್ಖತನದ ಕೆಲಸವನ್ನು ನಾನು ಮಾಡುವುದಿಲ್ಲ. ನಾನು ಅವರಂತ ಮೂರ್ಖನಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸ್ವಾತಂತ್ರ್ಯ ವೀರ ಸಾರ್ವಕರ್ ಅವರ ’ಹಿಂದುತ್ವ ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಹಿಂದುತ್ವ ಗ್ರಂಥವನ್ನು ಜನರಿಗೆ ಪರಿಚಯಿಸಲು ಹೊರಟಿದ್ದೇವೆ. ಯಾರು ಇದನ್ನು ಅರ್ಥಮಾಡಿಕೊಂಡಿದ್ದಾರೋ , ಒಪ್ಪಿಕೊಂಡಿದ್ದಾರೋ ಅವರಿಗೆ ತಿಳಿಸುವ ಅಗತ್ಯ ಇಲ್ಲ. ಮೂರ್ಖತೆಯನ್ನು ಹೊದ್ದು ಮಲಗಿದ ವಿಚಾರವಾದಿಗಳು ಎಂದುಕೊಂಡವರಿಗೆ ಏನೂ ಹೇಳಿದರೂ ಅರ್ಥವಾಗುವುದಿಲ್ಲ .ತಮ್ಮ ಬುದ್ದಿ ಮತ್ತು ತಲೆಯನ್ನು ಮಾರಾಟಕ್ಕಿಟ್ಟಿರುವ ಸಮೂಹವದು ಎಂದು ವ್ಯಂಗ್ಯವಾಡಿದ್ದಾರೆ.
ಇವತ್ತಿನ ಕಾಪಿ ಪೇಸ್ಟ್ ಪಿಎಚ್ಡಿ ಮಾಡಿದಂತೆ ಸಾವರ್ಕರ್ ಮಾಡಿಲ್ಲ. ವಿಚಾರವಾದಿಗಳಂಥವರಿಗೆ ಎಷ್ಟು ಹೇಳಿದರೂ ಈ ವಿಷಯ ಅರ್ಥವಾಗುವುದಿಲ್ಲ. ಅವರು ಯಾವತ್ತೂ ಕಿವಿ ಮುಚ್ಚಿಕೊಂಡೇ ಇರುತ್ತಾರೆ. ಅವರು ಯಾವತ್ತೋ ಮಾರಾಟಗೊಂಡವರು. ಜಾತ್ಯತೀತ ಬಣ್ಣಹಚ್ಚಿಕೊಂಡಾಗ ಮಾತ್ರ ಅವರನ್ನು ಸ್ವಲ್ಪ ಹೊತ್ತು ನೋಡಬಹುದು. ಬಣ್ಣ ಕಳಚಿದರೆ ಅವರನ್ನು ಯಾರೂ ನೋಡುವುದಿಲ್ಲ ಎಂದು ವ್ಯಂಗ್ಯವಾಡಿದ ಅವರು, "ಇದು ಬರೆದಿರುವ ಪುಸ್ತಕ ಅಲ್ಲ. ಬದುಕಿರುವ ದಾರಿ" ಎಂದು ಬಣ್ಣಿಸಿದರು.