ಬೆಳ್ತಂಗಡಿ,ಡಿ.18 (DaijiworldNews/HR): ಗುರುವಾರದಂದು ಉಜಿರೆಯ ರಥಬೀದಿ ಅಶ್ವತ್ಥ ಕಟ್ಟೆ ಸಮೀಪದ ಮನೆ ಮುಂದೆ ಆಟವಾಡುತ್ತಿದ್ದ 8 ವರ್ಷದ ಮಗುವೊಂದನ್ನು ಅಪಹರಣ ನಡೆಸಿದ ದುಷ್ಕರ್ಮಿಗಳು 17 ಕೋ.ರೂ. ಗೆ ಬೇಡಿಕೆಯಿಟ್ಟಿದ್ದಾರೆ.

ಉಜಿರೆ ಉದ್ಯಮಿ ರಥಬೀದಿ ನಿವಾಸಿ ಎ.ಕೆ.ಶಿವನ್ ಎಂಬುವರ ಮೊಮ್ಮಗ ಅನುಭವ್ (8) ಮನೆ ಎದುರುಗಡೆ ಆಟವಾಡುತ್ತಿದ್ದ ವೇಳೆ ಅಪರಿಚಿತರು ಕಾರಿನಲ್ಲಿ ಅಪಹರಣ ಮಾಡಿದ್ದು, ಮನೆ ಮಂದಿ ಕಾರಿನ ಬಳಿ ಬಂದಂತೆ ಪರಾರಿಯಾಗಿದ್ದಾರೆ.
ಇನ್ನು ಮಗುವಿನ ತಾಯಿಗೆ ಕರೆ ಮಾಡಿ 100 ಬಿಟ್ ಕಾಯಿನ್ ಅಂದರೆ 17 ಕೋಟಿ ರೂ. ನೀಡುವಂತೆ ಬೇಡಿಕೆಯಿಟ್ಟಿದ್ದಾರೆಂದು ತಿಳಿದು ಬಂದಿದೆ.
ಮಗು ಅಪಹರಣದ ಕುರಿತು ಪೊಲೀಸರು ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದರೂ ವಾಹನದ ಗುರುತು ಪತ್ತೆಯಾಗಿಲ್ಲ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಬಂಟ್ವಾಳ ಡಿವೈಎಸ್ ಪಿ ವೆಲೆಂಟೈನ್ ಡಿಸೋಜ ಅವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ, ಉಪನಿರೀಕ್ಷಕ ನಂದಕುಮಾರ್, ಧರ್ಮಸ್ಥಳ ಠಾಣೆ ಉಪನಿರೀಕ್ಷಕ ಪವನ್ ಕುಮಾರ್ ತಂಡ ರಚಿಸಿ ತನಿಖೆ ಕೈಗೊಂಡಿದ್ದು ಶೋಧ ಕಾರ್ಯ ನಡೆಸುತ್ತಿದ್ದಾರೆ.