ಉಡುಪಿ, ಡಿ.18 (DaijiworldNews/PY): ಜಿಲ್ಲೆಯಲ್ಲಿ ಕೇವಲ ಒಂದು ಖಾಸಗಿ ವೈದ್ಕಯಕೀಯ ಕಾಲೇಜು ಮಾತ್ರ ಇದ್ದು, ಸರ್ಕಾರಿ ವೈದ್ಯಕೀಯ ಕಾಲೇಜಿನ ಬೇಡಿಕೆ ಇರುವ ಕಾರಣ ತಕ್ಷಣವೇ ಸರ್ಕಾರ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಯೋಜನೆ ರೂಪಿಸುವ ವಿಚಾರವನ್ನು ಶಾಸಕ ಕೆ.ರಘುಪತಿ ಭಟ್ ಪ್ರಸ್ತಾಪಿಸಿದ್ದಾರೆ.

ಡಿ.16ರ ಗುರುವಾರದಂದಿ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಸರ್ಕಾರಿ ಭರವಸೆಗಳ ಸಮಿತಿ ಸಭೆಯಲ್ಲಿ ಉಡುಪಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಿಸುವ ಪ್ರಸ್ತಾವನೆಯನ್ನಿಟ್ಟರು.
ಜಿಲ್ಲಾಸ್ಪತ್ರೆಯನ್ನು 250 ಹಾಸಿಗೆಗಳ ಆಸ್ಪತ್ರೆಯನ್ನಾಗಿಸುವ ಯೋಜನೆಗೆ ಸರ್ಕಾರ ಈಗಾಗೇ ಅನುಮೋದನೆ ನೀಡಿದೆ. ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಆಸ್ಪತ್ರೆಯಿಂದ ಹತ್ತು ಕಿ.ಮೀ ವ್ಯಾಪ್ತಿಯಲ್ಲಿ 20 ಎಕರೆ ಜಾಗವನ್ನು ಈಗಾಗಲೇ ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾನಿಲಯದ ಕುಲಸಚಿವರಲ್ಲಿ ಜಿಲ್ಲಾಸ್ಪತ್ರೆ ಹೊಂದಿರುವ ಕಟ್ಟಡದಲ್ಲಿ ಪ್ರಸಕ್ತ ಸಾಲಿನಲ್ಲಿ ಬಿಎಸ್ಸಿ ನರ್ಸಿಂಗ್ ಕಾಲೇಜು ಪ್ರಾರಂಭಿಸುವ ಬಗ್ಗೆ ಚರ್ಚಿಸಿದರು.
ವೈದ್ಯಕೀಯ ಶಿಕ್ಷಣ ವಿಭಾಗದ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್, ಜಂಟಿ ಕಾರ್ಯದರ್ಶಿ ಎಂ.ಶಿಲ್ಪಾ, ಬೀದರ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಿರ್ದೇಶಕ ಡಾ.ಶಿವಕುಮಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.