ಕಾಸರಗೋಡು, ಡಿ.18 (DaijiworldNews/PY): ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿ ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖಾ ತಂಡದ ಮುಂದೆ ಹಾಜರಾದ ನಾಲ್ಕನೇ ಆರೋಪಿ ಜೈನುಲ್ ಅಬಿದ್(52) ಅನ್ನು ವಿಚಾರಣೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.

ಜೈನುಲ್ ಅಬಿದ್ ಜ್ಯುವೆಲ್ಲರಿಯ ನಿರ್ದೇಶಕನಾಗಿದ್ದು, ತಲೆ ಮರೆಸಿಕೊಂಡಿದ್ದನು. ಡಿ.16ರ ಗುರುವಾರ ಸಂಜೆ ತನಿಖಾ ತಂಡದ ಮುಂದೆ ಜೈನುಲ್ ಅಬಿದ್ ಶರಣಾಗಿದ್ದನು. ಒಂದು ತಿಂಗಳಿನಿಂದ ಈತ ತಲೆಮರೆಸಿಕೊಂಡಿದ್ದನು. ಈತ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ್ದು, ತನಿಖಾ ತಂಡದ ಮುಂದೆ ಹಾಜರಾಗುವಂತೆ ಆದೇಶಿಸಿತ್ತು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಜೇಶ್ವರ ಶಾಸಕ ಎಂ. ಸಿ.ಕಮರುದ್ದೀನ್ ಅನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ಪ್ರಮುಖ ಆರೋಪಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಟಿ.ಕೆ.ಪೂಕೋಯ ತಂಗಳ್ ಹಾಗೂ ಈತನ ಪುತ್ರ ಶಮೀಮ್ ತಲೆಮರೆಸಿಕೊಂಡಿದ್ದಾರೆ.