ಉಡುಪಿ, ಡಿ.18 (DaijiworldNews/PY): "ತುಕುಡೆ ಗ್ಯಾಂಗ್ನ ವ್ಯವಸ್ಥಿತ ಷಡ್ಯಂತ್ರಕ್ಕೆ ರೈತರು ಬಲಿಯಾಗಬಾರದು, ರೈತರ ಹೆಸರಿನಲ್ಲಿ ಜೆ.ಎನ್.ಯು ವಿದ್ಯಾರ್ಥಿಗಳು ಕೂಡ ರಸ್ತೆಗೆ ಬಂದು ಪ್ರತಿಭಟನೆ ಮಾಡುತ್ತಿರುವುದು ಹಾಸ್ಯಸ್ಪದ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿಮಸೂದೆಯ ವಿರುದ್ಧ ರಾಜಕೀಯ ಪಕ್ಷಗಳು ಸೇರಿ ಹೋರಾಟ ಮಾಡುತ್ತಿರುವವರು ಡೋಂಗಿಗಳು ಮತ್ತು ಇವರ ಇಬ್ಬಗೆಯ ನೀತಿ ತೋರಿಸುತ್ತಿದೆ" ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಎಂದರು.



ಶುಕ್ರವಾರ ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು, "ಕೇಂದ್ರ ಸರ್ಕಾರ ಈ ಮಸೂದೆಯನ್ನು ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರ ಜತೆ ಚರ್ಚಿಸಿ ಪಾಸ್ ಮಾಡಲಾಗಿದೆ. ಈಗ ಇವರುಗಳ ಡ್ರಾಮ ಮಾಡುತ್ತಿದ್ದಾರೆ. ರೈತರನ್ನು ಮುಂದೆ ತೋರಿಸಿ ಉಳಿದ ರಾಜಕೀಯ ಪಕ್ಷಗಳು ಬಿಜೆಪಿಯನ್ನು ವಿರೋಧಿಸುವ ದೃಷ್ಟಿಯಿಂದ ಈ ಮಸೂದೆಯನ್ನು ವಿರೋಧ ಮಾಡುತ್ತಿದ್ದಾರೆ" ಎಂದರು.
"ಎಪಿಎಂಸಿಯಲ್ಲಿ ಮಧ್ಯವರ್ತಿ ಹಾವಳಿ ತಪ್ಪಿಸಿ ನೇರವಾಗಿ ಕೃಷಿಕರಿಗೆ ಲಾಭ ಮಾಡುವ ಉದ್ದೇಶದಿಂದ ಈ ಮಸೂದೆ ಪಾಸ್ ಆಗಿದೆ. ತುಕುಡೆ ಗ್ಯಾಂಗ್ನ ವ್ಯವಸ್ಥಿತ ಷಡ್ಯಂತ್ರಕ್ಕೆ ರೈತರು ಬಲಿಯಾಗಬಾರದು. ಹಿಂದೆ ಶರತ್ ಪವರ್ ಕೇಂದ್ರದ ಕೃಷಿ ಸಚಿವರಾಗಿದ್ದಾಗ ಕೂಡ ಈ ಮಸೂದೆಯ ಬಗ್ಗೆ ಎಲ್ಲಾ ರಾಜ್ಯಕ್ಕೆ ಪತ್ರ ಬರೆದಿದ್ದರು. ರೈತರ ಹೆಸರಿನಲ್ಲಿ ಜೆ.ಎನ್.ಯು ವಿದ್ಯಾರ್ಥಿಗಳು ಕೂಡ ರಸ್ತೆಗೆ ಬಂದು ಪ್ರತಿಭಟನೆ ಮಾಡುತ್ತಿರುವುದು ಹಾಸ್ಯಸ್ಪದ" ಎಂದರು.
"ರೈತರ ನ್ಯಾಯಯುತ ಬೇಡಿಕೆ ಇಟ್ಟರೆ ಮಾತುಕತೆಗೆ ಸಿದ್ಧರಿದ್ದೇವೆ. ರೈತರು ಕಾಯ್ದೆಯನ್ನು ಅರಿಯಬೇಕು. ಮೊನ್ನೆ ದೆಹಲಿಯಲ್ಲಿ ಉಮರ್ ಖಾಲೀದನ್ನು ಬಿಡುಗಡೆ ಮಾಡಬೇಕು ಎಂದು ರೈತರ ಪ್ರತಿಭಟನೆಯಲ್ಲಿ ಬೇಡಿಕೆ ಇಟ್ಟಿದ್ದು, ಇದು ವ್ಯವಸ್ಥಿತ ಷಡ್ಯಂತ್ರ. ಇದಕ್ಕೆ ರೈತರು ಬಲಿಯಾಗಬಾರದು. ಈ ರೈತ ಕಾಯ್ದೆಯ ಹಿಂದೆ ಪ್ರಧಾನಿಯವರ ದೂರ ದೃಷ್ಟಿ ಚಿಂತನೆಯಿದೆ" ಎಂದರು.
"ಈ ಬಾರಿ ಪಂಚಾಯತ್ ಚುನಾವಣೆಯಲ್ಲಿ 154 ಗ್ರಾಮ ಪಂಚಾಯತ್ಗಳ ಪೈಕಿ 130 ಕ್ಕೂ ಹೆಚ್ಚು ಸ್ಥಾನವನ್ನು ಗೆಲ್ಲುವ ಗುರಿ ಇದೆ. ಒಳ್ಳೆಯ ವ್ಯಕ್ತಿಗಳು ಪಂಚಾಯತ್ಗೆ ಆಯ್ಕೆ ಆಗಲಿ ಭ್ರಷ್ಟಾಚಾರ ರಹಿತ ಅಭ್ಯರ್ಥಿ ಆಗಬೇಕು ಸರಕಾರದಿಂದ ಬರುವ ಒಂದೊಂದು ಹಣವನ್ನು ಸದುಪಯೋಗ ಪಡಿಸಿಕೊಳ್ಳುವ ಬುದ್ಧಿವಂತರು ಶಿಕ್ಷಿತರು ಗೆಲ್ಲಬೇಕು" ಎಂದು ಹೇಳಿದರು.
"15ನೇ ಹಣಕಾಸಿನ ಆಯೋಗದಿಂದ ನೇರವಾಗಿ ಪಂಚಾಯತ್ಗಳಿಗೆ ನೇರವಾಗಿ ಹಣ ಬರುವಂತೆ ಚಿಂತನೆ ನಡೆಸುತ್ತಾ ಇದೆ. ಆ ನಿಟ್ಟಿನಲ್ಲಿ ಕೇಂದ್ರ ಸರಕಾರವು ಕರ್ನಾಟಕ ಸರಕಾರಕ್ಕೆ 31000 ಕೋಟಿ ಅನುದಾನ ಕೊಡಲು ಮುಂದಾಗಿದೆ. ಜನಸಂಖ್ಯೆ ಮತ್ತು ಪಂಚಾಯತ್ ಅಭಿವೃದ್ಧಿಯ ಮೇಲೆ ಅನುದಾನ ಹಂಚಿಕೆಯಾಗುತ್ತದೆ" ಎಂದರು.
"2024 ವೇಳೆಗೆ ಎಲ್ಲ ಮನೆಗೆ ಪೈಪ್ ಸಂಪರ್ಕ ಕೊಟ್ಟು ಜನಜೀವನ್ ಮಿಷನ್ ಮೂಲಕ ಕುಡಿಯುವ ನೀರು ಕೊಡುವ ಗುರಿ ಸರಕಾರದ್ದಿದೆ" ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಪ್ರ.ಕಾರ್ಯದರ್ಶಿ ಕುತ್ಯಾರ್ ನವೀನ್ ಶೆಟ್ಟಿ, ಶಾಸಕ ರಘಪತಿ ಭಟ್, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಗೀತಾಂಜಲಿ ಸುವರ್ಣ, ಮಹಿಳಾಮೋರ್ಚ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ, ಜಿಲ್ಲಾ ವಕ್ತಾರ ಗುರುಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.