ಕಾಸರಗೋಡು,ಡಿ.18 (DaijiworldNews/HR): ಮಂಜೇಶ್ವರ ಬ್ಲಾಕ್ ಪಂಚಾಯತ್ನಲ್ಲಿ ಅತಂತ್ರ ಫಲಿತಾಂಶ ಬಂದಿರುವುದರಿಂದ ಯುಡಿಎಫ್ಗೆ ಸಿಪಿಎಂ ಅಥವಾ ಎಸ್ಡಿಪಿಐನ ಬೆಂಬಲ ಅನಿವಾರ್ಯವಾಗಿದೆ.

ಯುಡಿಎಫ್ ಮತ್ತು ಬಿಜೆಪಿ ತಲಾ ಆರು ಸ್ಥಾನಗಳನ್ನು ಪಡೆದಿದ್ದು, 15 ಸದಸ್ಯ ಬಲದಲ್ಲಿ ಬಹುಮತಕ್ಕೆ ಎಂಟು ಸ್ಥಾನಗಳು ಅಗತ್ಯವಾಗಿದೆ. ಎಲ್ಡಿಎಫ್ 2 ಮತ್ತು ಎಸ್ಡಿಪಿಐ ಒಂದು ಸ್ಥಾನವನ್ನು ಪಡೆದುಕೊಂಡಿದೆ.
ಈ ಎರಡೂ ಪಕ್ಷಗಳು ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆ ಇಲ್ಲದಿರುವುದರಿಂದ ಯುಡಿಎಫ್ಗೆ ಅಧಿಕಾರ ಉಳಿಸಿಕೊಳ್ಳಲು ಈ ಎರಡೂ ಪಕ್ಷಗಳ ಬೆಂಬಲ ಅಗತ್ಯವಾಗಿದೆ.
ಇನ್ನು ಈ ಎರಡೂ ಪಕ್ಷಗಳು ಯುಡಿಎಫ್ ಮತ್ತು ಬಿಜೆಪಿಗೆ ಬೆಂಬಲ ನೀಡದಿದ್ದಲ್ಲಿ ಟಾಸ್ (ಚೀಟಿ ಎತ್ತುವ) ಮೂಲಕ ನೂತನ ಆಡಳಿತವನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಉಂಟಾಗಲಿದೆ.
ಪೈವಳಿಕೆ ಹಾಗೂ ಕುಂಬಳೆ ಗ್ರಾಮ ಪಂಚಾಯತ್ನಲ್ಲೂ ಇದೇ ಸ್ಥಿತಿ ತಲೆದೋರಿದ್ದು, ಪೈವಳಿಕೆಯಲ್ಲಿ ಎಲ್ಡಿಎಫ್ ಮತ್ತು ಬಿಜೆಪಿಗೆ ತಲಾ 8 ಸ್ಥಾನ ಲಭಿಸಿದೆ. ಅಧಿಕಾರಕ್ಕೆ ಬರಲು 10 ಸ್ಥಾನಗಳ ಅಗತ್ಯ ಇದೆ. ಯುಡಿಎಫ್ ಮೂರು ಸ್ಥಾನಗಳನ್ನು ಪಡೆದುಕೊಂಡಿದೆ. ಇಲ್ಲಿ ಅಧಿಕಾರ ಹಿಡಿಯಲು ಎಲ್ಡಿಎಫ್ಗೆ ಯುಡಿಎಫ್ ಬೆಂಬಲ ಅಗತ್ಯ. ಬೆಂಬಲ ನೀಡದಿದ್ದಲ್ಲಿ ಅದೃಷ್ಟ ಚೀಟಿ ಎತ್ತುವ ಮೂಲಕ ನೂತನ ಆಡಳಿತ ಸಮಿತಿಯನ್ನು ಆಯ್ಕೆ ಮಾಡಲಿದೆ.
ಕುಂಬಳೆ ಗ್ರಾಮ ಪಂಚಾಯತ್ನಲ್ಲೂ ಯುಡಿಎಫ್ ಮತ್ತು ಬಿಜೆಪಿ 9 ಸ್ಥಾನ ಪಡೆದುಕೊಂಡಿದೆ. ಇಲ್ಲಿ ಎರಡೂ ಪಕ್ಷಗಳಿಗೂ ಪಕ್ಷೇತರರ ಬೆಂಬಲ ಅಗತ್ಯವಾಗಿದೆ. ಪಕ್ಷೇತರರು ನಾಲ್ಕು ಸ್ಥಾನಗಳನ್ನು ಪಡೆದಿದ್ದಾರೆ.
ಬದಿಯಡ್ಕ ಗ್ರಾಮ ಪಂಚಾಯತ್ನಲ್ಲೂ ಯುಡಿಎಫ್ ಮತ್ತು ಬಿಜೆಪಿ ತಲಾ 8 ಸ್ಥಾನಗಳನ್ನು ಪಡೆದಿದ್ದು, ಅಧಿಕಾರಕ್ಕೆ ಬರಲು ಪಕ್ಷೇತರನ ಬೆಂಬಲ ಬೇಕಿದೆ. ಇಲ್ಲಿ ಒಂದು ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಮೀಂಜ ಗ್ರಾಮ ಪಂಚಾಯತ್ನಲ್ಲಿ ಯಾರಿಗೂ ಬಹುಮತ ಲಭಿಸಿಲ್ಲ. ಬಿಜೆಪಿ 6, ಎಲ್ಡಿಎಫ್ 5, ಯುಡಿಎಫ್ 3 ಹಾಗೂ ಪಕ್ಷೇತರ 1 ಸ್ಥಾನ ಪಡೆದಿದ್ದು, ಬಿಜೆಪಿಗೆ ಪಕ್ಷೇತರ ಅಥವಾ ಎಲ್ಡಿಎಫ್ ಗೆ ಯುಡಿಎಫ್ ಬೆಂಬಲ ನೀಡಲಿದ್ದಲ್ಲಿ ಮಾತ್ರ ಅಧಿಕಾರ ನಡೆಸಬಹುದಾಗಿದೆ.
ವರ್ಕಾಡಿಯಲ್ಲಿ ಯುಡಿಎಫ್ 4, ಎಲ್ಡಿ ಎಫ್ ಮತ್ತು ಬಿಜೆಪಿ ತಲಾ 4 ಸ್ಥಾನಗಳನ್ನು ಹೊಂದಿದ್ದು, ಇಬ್ಬರು ಪಕ್ಷೇತರರ ಬೆಂಬಲ ಬಿಜೆಪಿ ಅಥವಾ ಎಲ್ಡಿಎಫ್ಗೆ ಅಗತ್ಯ ಇದೆ.
ಅತಂತ್ರ ದಲ್ಲಿರುವ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಅಧಿಕಾರ ನಡೆಸಲು ಬದ್ದ ವೈರಿಗಳ ಬೆಂಬಲ ಯಾಚಿಸಬೇಕಾದ ಅನಿವಾರ್ಯತೆ ರಾಜಕೀಯ ಪಕ್ಷಗಳಿಗೆ ಉಂಟಾಗಿದೆ.