ಜೂ 18 : ಪಿ ಎನ್ ಬಿ ಹಗರಣದ ಪ್ರಕರಣದ ಪ್ರಮುಖ ಆರೋಪಿ ನೀರವ್ ಮೋದಿ ಒಂದಲ್ಲ, ಎರಡಲ್ಲ, ಬರೋಬ್ಬರಿ ಅರ್ಧ ಡಜನ್ ಗೂ ಹೆಚ್ಚು ಪಾಸ್ ಪೋರ್ಟ್ ಗಳನ್ನು ಬಳಸುತ್ತಿದ್ದಾರೆ ಎನ್ನುವ ಶಾಕಿಂಗ್ ಮಾಹಿತಿ ಲಭ್ಯವಾಗಿದೆ. ಈ ಆರೋಪದ ಮೇಲೆ ನೀರವ್ ಮೋದಿ ವಿರುದ್ದ ಹೊಸ ಎಫ್ ಐ ಆರ್ ದಾಖಲಿಸುವುದಾಗಿ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಒಂದಕ್ಕಿಂತ ಹೆಚ್ಚು ಪಾಸ್ ಪೋರ್ಟ್ ಹೊಂದುವುದು ಅಥವಾ ಬಳಸುವುದು ಕಾನೂನಿನ ಪ್ರಕಾರ ಅಪರಾಧ. ಈ ಹಿನ್ನಲೆಯಲ್ಲಿ ಹೊಸ ಎಫ್ ಐ ಆರ್ ದಾಖಲಿಸಲು ಸಿದ್ದತೆಗಳು ನಡೆಯುತ್ತಿದೆ.
ನೀರವ್ ಮೋದಿಯ ವಿರುದ್ದ ದ ತನಿಖೆ ಚುರುಕುಗೊಂಡ ಬಳಿಕ ನೀರವ್ ಪದೇ ಪದೇ ಬೆಲ್ಜಿಯಂಗೆ ಭೇಟಿ ನೀಡುತ್ತಿರುವುದನ್ನು ಭಾರತೀಯ ಗುಪ್ತಚರ ಸಂಸ್ಥೆಗಳು ಪತ್ತೆ ಮಾಡಿವೆ. ಪಾಸ್ಪೋರ್ಟ್ ರದ್ದುಗೊಳಿಸಿದ ಬಳಿಕವೂ ಅವರು ಸತತವಾಗಿ ಪ್ರಯಾಣಿಸುತ್ತಿದ್ದರು. ಈ ಹಿನ್ನಲೆಯಲ್ಲಿ ಅವರ ಬಳಿ ಆರಕ್ಕೂ ಹೆಚ್ಚು ಪಾಸ್ಪೋರ್ಟ್ಗಳಿರುವ ವಿಚಾರ ಬಯಲಾಗಿದೆ. ಇವುಗಳಲ್ಲಿ ಎರಡು ಪಾಸ್ಪೋರ್ಟ್ ಗಳು ಕಳೆದ ಕೆಲ ಸಮಯದಿಂದ ಸಕ್ರಿಯವಾಗಿವೆ ಎಂದು ಹೇಳಲಾಗಿದೆ. ಲಭ್ಯವಾದ ಮಾಹಿತಿ ಅನ್ವಯ ಉಳಿದ ನಾಲ್ಕು ಪಾಸ್ಪೋರ್ಟ್ಗಳು ಸಕ್ರಿಯವಾಗಿಲ್ಲ ಎಂದು ತಿಳಿದು ಬಂದಿದೆ. ಇನ್ನು ಸಕ್ರಿಯವಾಗಿರುವ ಪಾಸ್ಪೋರ್ಟ್ಗಳಲ್ಲಿ ಒಂದರಲ್ಲಿ ನೀರವ್ ಮೋದಿಯ ಸಂಪೂರ್ಣ ಹೆಸರನ್ನು ನಮೂದಿಸಲಾಗಿದ್ದು, ಮತ್ತೊಂದರಲ್ಲಿ ಕೇವಲ ಅರ್ಧ ಹೆಸರಷ್ಟೇ ಮುದ್ರಿಸಲಾಗಿದೆ. ಈ ಪಾಸ್ಪೋರ್ಟ್ನಲ್ಲಿ ಅವರಿಗೆ ಬ್ರಿಟನ್ನ 40 ತಿಂಗಳ ವೀಜಾ ಕೂಡಾ ನೀಡಲಾಗಿತ್ತು. ಕಳೆದ ಮಾರ್ಚ್ 31 ರ ವರೆಗೂ ನೀರವ್ ಬ್ರಿಟನ್ ನಲ್ಲೇ ಇದ್ದು ಆ ನಂತರ ಇತರೆ ಪಾಸ್ ಪೋರ್ಟ್ ಗಳ ಬಳಸಿ ಮತ್ತೊಂದು ರಾಷ್ಟ್ರಕ್ಕೆ ಪರಾರಿಯಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಈ ನಡುವೆ ನೀರವ್ ವಿರುದ್ದ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ಭಾರತ ಯತ್ನಿಸುತ್ತಿದೆ.