ಮಂಗಳೂರು, ಡಿ.18 (DaijiworldNews/PY): ನಗರದ ಎರಡು ಕಡೆಗಳಲ್ಲಿ ಉಗ್ರರ ಪರ ಗೋಡೆ ಬರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಆರೋಪಿಗಳೊಂದಿಗೆ ನಂಟು ಹೊಂದಿದ್ದಾನೆ ಎನ್ನಲಾದ ವಿದೇಶದಲ್ಲಿರುವ ವ್ಯಕ್ತಿಯನ್ನು ವಶಕ್ಕೆ ಪಡೆಯುವ ಸಲುವಾಗಿ ಮಂಗಳೂರು ಪೊಲೀಸರು ಲುಕ್ ಔಟ್ ನೋಟಿಸ್ ಜಾರಿಗೆ ನಿರ್ಧರಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೊಹಮ್ಮದ್ ಶಾರೀಕ್ ಹಾಗೂ ಮಾಝ್ ಮುನೀರ್ ಸಾದಿಕ್ ಅವರನ್ನು ಬಂಧಿಸಲಾಗಿದೆ. ಇವರನ್ನು ವಿಚಾರಣೆ ನಡೆಸಿದ ಸಂದರ್ಭ, ಮುಖ್ಯ ಆರೋಪಿ ಶಾರೀಕ್ ಈ ಕೃತ್ಯ ಎಸಗುವ ಮುನ್ನ ವಿದೇಶದಲ್ಲಿರುವ ವ್ಯಕ್ತಿಯೊಂದಿಗೆ ದೂರವಾಣಿ ಸಂವಹನ ನಡೆಸಿದ್ದಾನೆ ಎನ್ನುವ ವಿಚಾರವನ್ನು ಬಹಿರಂಗಪಡಿಸಿದ್ದಾನೆ.
ವಿದೇಶದಲ್ಲಿರುವ ವ್ಯಕ್ತಿಗೆ ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಇದೆ ಎನ್ನುವ ಶಂಕೆ ಇದ್ದು, ಈತನ ತನಿಖೆ ಅಗತ್ಯವಾಗಿರುವ ಕಾರಣ ಲುಕ್ ಔಟ್ ನೋಟಿಸ್ ಜಾರಿಗೆ ಅಧಿಕಾರಿಗಳು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.