ಮಂಗಳೂರು, ಡಿ.18 (DaijiworldNews/PY): ಸಾಮಾನ್ಯವಾಗಿ ಸಮುದ್ರದಲ್ಲಿ ಈಜುವುದು ಎಂದರೆ ಭಯವಾಗುತ್ತದೆ. ಆದರೆ, ಇಲ್ಲೋರ್ವ ಶಿಕ್ಷಕ ಪದ್ಮಾಸನ ಹಾಕಿ, ಕಾಲಿಗೆ ಸರಪಳಿ ಕಟ್ಟಿ ಸಮುದ್ರದಲ್ಲಿ ಒಂದು ಕಿ.ಮೀ ದೂರದವರೆಗೆ ಈಜಿ ಸಾಹಸ ಮೆರೆದಿದ್ದಾರೆ.












ಈಗಾಗಲೇ ಈಜಿನ ಮೂಲಕ ಹೆಸರುವಾಸಿಯಾಗಿರುವ ಶಿಕ್ಷಕ ನಾಗರಾಜ ಖಾರ್ವಿ ಅವರು ಈ ದಾಖಲೆ ಸೃಷ್ಠಿಸಿದ್ದಾರೆ. ನಾಗರಾಜ ಅವರು ಬಂಟ್ವಾಳ ತಾಲೂಕಿನ ಕಲ್ಮಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಖಾರ್ವಿ ಅವರು ಕೇವಲ 25 ನಿಮಿಷ 16 ಸೆಕೆಂಡಿನಲ್ಲಿ ಈ ದಾಖಲೆ ನಿರ್ಮಿಸಿದ್ದಾರೆ. ಪದ್ಮಾಸನ ಹಾಕಿ, ಕಾಲಿಗೆ ಸರಪಳಿ ಬಿಗಿದು ನೀರಿನಲ್ಲಿ ಒಂದು ಕಿ.ಮೀ ದೂರ ಕ್ರಮಿಸುವ ಮುಖೇನ ಹೊಸ ದಾಖಲೆ ಸೃಷ್ಠಿಸಿದ್ದಾರೆ. ಬೆಳಗ್ಗೆ 8.55ಕ್ಕೆ ತಣ್ಣೀರುಬಾವಿಯ ದಡದಿಂದ ಈಜು ಪ್ರಾರಂಭಿಸಿದ ಖಾರ್ವಿ 9.20ಕ್ಕೆ ದಡಕ್ಕೆ ವಾಪಾಸ್ಸಾಗಿದ್ದಾರೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಗಾಗಿ ಈ ಸಾಧನೆಯನ್ನು ಯೋಜಿಸಿದ್ದರು. ಈ ವೇಳೆ ದ.ಕ ಜಿಲ್ಲಾ ಕ್ರೀಡಾ ವಿಭಾಗದ ಅಧಿಕಾರಿ ಪ್ರದೀಪ್ ಡಿಸೋಜಾ ಅವರು ಖಾರ್ವಿ ಅವರ ಸಾಧನೆಗೆ ಸಾಕ್ಷಿಯಾದರು.
ಕಳೆದ ಜನವರಿಯಲ್ಲಿ ಗುಜರಾತ್ನ ವಡೋದರಾದಲ್ಲಿ ನಡೆದ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ನಾಗರಾಜ ಖಾರ್ವಿ ಅವರು ಎರಡು ಚಿನ್ನ ಹಾಗೂ ಒಂದು ಕಂಚಿ ಪದಕ ಪಡೆದಿದ್ದರು. ಈಜು ಹಾಗೂ ಯೋಗದ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಸಮುದ್ರದ ಬಗೆಗಿರುವ ತಪ್ಪು ಕಲ್ಪನೆಯನ್ನು ದೂರ ಮಾಡಬೇಕು ಎನ್ನುವ ಉದ್ದೇಶವನ್ನು ಹೊಂದಿದ್ದಾರೆ.