ಬೆಳ್ತಂಗಡಿ,ಡಿ.19 (DaijiworldNews/HR): ಉಜಿರೆಯಲ್ಲಿ ಮನೆಮುಂದೆ ಆಟವಾಡುತ್ತಿದ್ದ ಬಾಲಕನ ಅಪಹರಣ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದ್ದು, ಪೊಲೀಸರು ಬಾಲಕನನ್ನು ಸುರಕ್ಷಿತವಾಗಿ ರಕ್ಷಿಸಿ, ಆರು ಜನರನ್ನು ಬಂಧಿಸಿದ್ದಾರೆ.

ಬಾಲಕನನ್ನು ಕೋಲಾರದಲ್ಲಿ ಪತ್ತೆ ಹಚ್ಚಿದ ಪೊಲೀಸರು ಆರು ಮಂದಿ ಅಪಹರಣಕಾರರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಮಂಡ್ಯ ಮೂಲದ ಐಟಿ ಕಂಪನಿಯಲ್ಲಿ ಕಾರ್ಯನಿರ್ವಹಿಸುವ ರಂಜಿತ್ (22), ಕ್ಯಾಬ್ ಚಾಲಕನಾಗಿರುವ ಹನುಮಂತು (21), ಮೈಸೂರು ಮೂಲದ ಕ್ಯಾಬ್ ಚಾಲಕನಾಗಿರುವ ಗಂಗಾಧರ (25), ಬೆಂಗಳೂರಿನಲ್ಲಿ ಮೆಕ್ಯಾನಿಕ್ ಉದ್ಯೋಗ ಮಾಡುವ ಕಮಲ್ (25), ಕೋಲಾರ ನಿವಾಸಿ, ವೃತ್ತಿಯಲ್ಲಿ ಟೈಲರ್ ಆಗಿರುವ ಮಂಜುನಾಥ್ (24) ಹಾಗೂ ಕೋಲಾರ ನಿವಾಸಿ, ಪೈಟಿಂಗ್ ವೃತ್ತಿ ಮಾಡುವ ಮಹೇಶ್ (26) ಎಂದು ಗುರುತಿಸಲಾಗಿದೆ.
ಗುರುವಾರದಂದು ಉಜಿರೆಯ ರಥಬೀದಿ ಅಶ್ವತ್ಥ ಕಟ್ಟೆ ಸಮೀಪದ ಮನೆ ಮುಂದೆ ಆಟವಾಡುತ್ತಿದ್ದಅನುಭವ್ (8) ಬಾಲಕನನ್ನು ಅಪಹರಣ ನಡೆಸಿದ ದುಷ್ಕರ್ಮಿಗಳು 17 ಕೋ.ರೂ. ಗೆ ಬೇಡಿಕೆಯಿಟ್ಟಿದ್ದು, ಈ ಪ್ರಕರಣ ಸಾಕಷ್ಟು ಆತಂಕ ಸೃಷ್ಟಿಸಿತ್ತು.
ಇನ್ನು ಕೋಲಾರದ ಮಾಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಹರಣಕಾರರನ್ನು ಮಗುವಿನೊಂದಿಗೆ ವಿಶೇಷ ತಂಡ ಪೊಲೀಸರು ಶನಿವಾರ ಬೆಳಗ್ಗೆ 5 ಗಂಟೆಗೆ ಪತ್ತೆ ಹಚ್ಚಿ, ತಕ್ಷಣ ಅಪಹರಣಕಾರರನ್ನು ಕೋಲಾರ ಪೊಲೀಸ್ ಠಾಣೆಗೆ ಕರೆತರಲಾಯಿತು.
ಇಂದು ಅಪರಾಹ್ನ 11ಗಂಟೆಗೆ ಕೋಲಾರ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಿ, ನಂತರ ಬೆಳ್ತಂಗಡಿ ನ್ಯಾಯಾಲಯಕ್ಕೆ ಕರೆತರಲಾಗುತ್ತದೆ ಎನ್ನಲಾಗಿದ್ದು, ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ಉಪನಿರೀಕ್ಷಕ ಬಂದಕುಮಾರ್, ಧರ್ಮಸ್ಥಳ ಠಾಣೆ ಉಪನಿರೀಕ್ಷಕ ಪವನ್ ಕುಮಾರ್ ನೇತೃತ್ವದ ವಿಶೇಷ ತಂಡ ಹಾಜರು ಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.