ಕಾಸರಗೋಡು, ಜೂ 18 : ಶಾಲಾ ವಿದ್ಯಾರ್ಥಿ ಯನ್ನು ಇರಿದು ಕೊಲೆಗೈದ ಪ್ರಕರಣದ ಆರೋಪಿಗೆ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜೀವಾವಧಿ ಕಠಿಣ ಸಜೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದೆ. ಅಂಬಲತ್ತರ್ದ ಮೊಯ್ದು ರವರ ಪುತ್ರ ಮುಹಮ್ಮದ್ ಫಹಾದ್ (8) ನ ಕೊಲೆ ಗೈದ ಪ್ರಕರಣದ ಆರೋಪಿ ಇರಿಯ ದ ವಿಜಯನ್ (31) ಗೆ ಶಿಕ್ಷೆ ವಿಧಿಸಿದೆ. ದಂಡ ಪಾವತಿಸದಿದ್ದಲ್ಲಿ ಮೂರು ವರ್ಷ ಅಧಿಕ ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಕೊಲೆಯಾದ ಬಾಲಕ ಫಹಾದ್ ಮತ್ತು ದೋಷಿ ವಿಜಯನ್
2015 ರ ಜುಲೈ 9 ರಂದು ಘಟನೆ ನಡೆದಿದ್ದು, ಕಲ್ಯೊಟ್ ಸರಕಾರೀ ಹಯರ್ ಸೆಕಂಡರಿ ಶಾಲಾ ಮೂರನೇ ತರಗತಿ ವಿದ್ಯಾರ್ಥಿಯಾಗಿದ್ದ ಫಹಾದ್ ಸಹೋದರಿ ಜೊತೆ ಬೆಳಿಗ್ಗೆ ಶಾಲೆಗೆ ತೆರಳುತ್ತಿದ್ದಾಗ ಹಿಂದಿನಿಂದ ಬಂದ ವಿಜಯನ್ ಇರಿದು ಪರಾರಿಯಾಗಿದ್ದನು. ಫಹಾದ್ ತಪ್ಪಿಸಿ ಓಡಲೆತ್ನಿಸಿದರೂ ಬೆನ್ನಟ್ಟಿ ಬಂದ ಈತ ಮನಬಂದಂತೆ ಇರಿದು ಪರಾರಿಯಾಗಿದ್ದನು.
ಬೊಬ್ಬೆ ಕೇಳಿ ಧಾವಿಸಿ ಬಂದ ಸ್ಥಳೀಯರು ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ. ಕೃತ್ಯ ನಡೆದು ಗಂಟೆಗಳ ಅವಧಿಯಲ್ಲೇ ಆರೋಪಿಯನ್ನು ನಾಗರಿಕರು ಹಿಡಿದು ಬೇಕಲ ಪೊಲೀಸರಿಗೊಪ್ಪಿಸಿದ್ದರು.ಫಹಾದ್ ನ ತಂದೆ ಜೊತೆ ಇದ್ದ ವೈಷಮ್ಯ ಕೊಲೆಗೆ ಕಾರಣ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿತ್ತು. ಹೊಸ ದುರ್ಗ ಠಾಣಾ ಸರ್ಕಲ್ ಇನ್ಸ್ ಪೆಕ್ಟರ್ ಯು.ಪ್ರೇಮನ್ ತನಿಖೆ ನಡೆಸಿ ಹೊಸದುರ್ಗ ಜ್ಯುಡಿಶಿಯಲ್ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು . ಬಳಿಕ ವಿಚಾರಣೆಗಾಗಿ ಕಾಸರಗೋಡು ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು . 60 ರಷ್ಟು ಸಾಕ್ಷಿಗಳಿದ್ದ ಪ್ರಕರಣದಲ್ಲಿ ಫಹಾದ್ ನ ಸಹೋದರಿ ಸೇರಿದಂತೆ 36 ಸಾಕ್ಷಿಗಳನ್ನು ವಿಸ್ತರಿಸಲಾಗಿತ್ತು . ಪ್ರಾಸಿಕ್ಯೂಷನ್ ಪರ ಅಡಿಷನಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಪಿ . ರಾಘವನ್ ಹಾಜರಾಗಿದ್ದರು