ಸುಳ್ಯ, ಡಿ.20 (DaijiworldNews/MB) : ಮಗನಿಂದ ಹಲ್ಲೆಗೊಳಗಾದ ವೃದ್ಧರೊಬ್ಬರು ಡಿಸೆಂಬರ್ 19 ರ ಶನಿವಾರ ರಾತ್ರಿ ಆಸ್ಪತ್ರೆಯ ಎರಡನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ.

ಬಂದಡ್ಕ ನಿವಾಸಿ ಲಕ್ಷ್ಮಣ ಗೌಡ (69) ರ ಮೇಲೆ ಮಗ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿ ಇಲ್ಲಿ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಡಿಸೆಂಬರ್ 1 ರಂದು, ಲಕ್ಷ್ಮಣ ಮತ್ತು ಅವರ ಮಗನ ಮಧ್ಯೆ ಯಾವುದೋ ಒಂದು ವಿಚಾರಕ್ಕೆ ಸಂಬಂಧಿಸಿ ಜಗಳವಾಡಿದ್ದು ಈ ಸಮಯದಲ್ಲಿ ಮಗನು ತನ್ನ ತಂದೆಯ ಮೇಲೆ ರಾಡ್ನಿಂದ ಹಲ್ಲೆ ಮಾಡಿದನೆಂದು ಆರೋಪಿಸಲಾಗಿದೆ.
ಈ ಜಗಳದಲ್ಲಿ ಗಾಯಗೊಂಡಿದ್ದ ಲಕ್ಷ್ಮಣ ಗೌಡರನ್ನು ನಗರದ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಡಿಸೆಂಬರ್ 19 ರಂದು, ಸೊಸೆ ಊಟ ತರಲೆಂದು ಹೊರಟಾಗ ಲಕ್ಷ್ಮಣ ಆಸ್ಪತ್ರೆಯ ವಾರ್ಡ್ನಿಂದ ಹೊರಬಂದರು. ಮಗ ಆಸ್ಪತ್ರೆಗೆ ಬಂದ ಸಂದರ್ಭ ತಂದೆ ಎಲ್ಲಿಯೂ ಕಾಣದ ಕಾರಣ ಹುಡುಕಾಡಿದಾಗ ಎರಡನೇ ಮಹಡಿಯಿಂದ ಹಾರಿದ ಲಕ್ಷ್ಮಣ ಅವರು ಆಸ್ಪತ್ರೆಯ ಮೈದಾನದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮೃತರ ಪತ್ನಿ ಲಲಿತಾ ಅವರು ಸಲ್ಲಿಸಿದ ದೂರಿನ ಪ್ರಕಾರ, ಮಗ ಮತ್ತು ಸೊಸೆ ನಿರಂತರವಾಗಿ ಜಗಳವಾಡುತ್ತಿದ್ದ ಕಾರಣ ಮಾನಸಿಕ ತೊಂದರೆಗೆ ಒಳಗಾಗಿದ್ದ ಕಾರಣ ಲಕ್ಷ್ಮಣ ಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.