ಪುತ್ತೂರು, ಡಿ.21 (DaijiworldNews/PY): ಡಿ.15ರ ಮಂಗಳವಾರ ಮುಂಜಾನೆ ಮಾಣಿ-ಮೈಸೂರು ರಸ್ತೆಯ ಕಬಕ ಸಮೀಪದ ಪೋಳ್ಯದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ಹಿರಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ವೆಂಕಟರಮಣ ಹೊಳ್ಳ ಅವರ ಬೈಕ್ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಟಿಪ್ಪರ್ ಚಾಲಕನನ್ನು ಸಂಚಾರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಪಾಣಾಜೆ ನಿವಾಸಿ ಚರಣ್ ಕುಮಾರ್ ಎಂದು ಗುರುತಿಸಲಾಗಿದೆ.
ಮರಳು ಲೋಡ್ಗಾಗಿ ಚರಣ್ ಮಂಗಳೂರು ಕಡೆ ತೆರಳುತ್ತಿದ್ದ ಸಂದರ್ಭ ಪೋಳ್ಯ ಸಮೀಪ ಟಿಪ್ಪರ್-ಬೈಕ್ ಮಧ್ಯೆ ಅಪಘಾತ ಸಂಭವಿಸಿತ್ತು. ಘಟನೆ ನಡೆದ ನಂತರ ಚಾಲಕ ಟಿಪ್ಪರ್ನೊಂದಿಗೆ ಪರಾರಿಯಾಗಿದ್ದ. ಪ್ರಾರಂಭದಲ್ಲಿ ಹೊಳ್ಳ ಅವರು ರಸ್ತೆ ಡಿವೈಡರ್ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದರು ಎನ್ನಲಾಗಿತ್ತು. ನಂತರ ಮೃತರ ತಲೆ ಜಜ್ಜಿದ ರೀತಿಯಲ್ಲಿ ಕಂಡು ಬಂದ ಕಾರಣ ಯಾವುದೋ ವಾಹನ ಡಿಕ್ಕಿಯಾಗಿರಬಹುದು ಎನ್ನುವ ಅನುಮಾನ ಮೂಡಿತ್ತು.
ವೆಂಕಟರಮಣ ಹೊಳ್ಳ ಅವರು ಪುತ್ತೂರಿನಿಂದ ಬಂಟ್ವಾಳದ ಮನೆಗೆ ಹೋಗುತ್ತಿದ್ದಾಗ ಪೋಳ್ಯ ಸಮೀಪದ ತಿರುವಿನಲ್ಲಿ ಹಿಂಬದಿಯಿಂದ ಬಂದ ಟಿಪ್ಪರ್ ಬೈಕ್ಗೆ ಡಿಕ್ಕಿ ಹೊಡೆದಿತ್ತು. ಟಿಪ್ಪರ್ಗೆ ಅಳವಡಿಸಿದ್ದ ಜಿಪಿಎಸ್ ಹಾಗೂ ಚಾಲಕನ ಮೊಬೈಲ್ ನೆಟ್ವರ್ಕ್ನ ಆಧಾರದ ಮೇಲೆ ಪೊಲೀಸರು ಪ್ರಕರಣ ಬೇಧಿಸಿದ್ದಾರೆ.