ಉಡುಪಿ, ಡಿ.21 (DaijiworldNews/PY): "ಕಳೆದ ಐದು ವರ್ಷದಿಂದ ನಾದಿನಿಯೊಂದಿಗೆ ಪ್ರೀತಿಯ ನಾಟಕವಾಡಿ, ಬಲಾತ್ಕಾರದಿಂದ ದೈಹಿಕ ಸಂಪರ್ಕ ಬೆಳೆಸಿ ಮೋಸ ಮಾಡಿದ ಕಾವಾಡಿಯ ವಕೀಲ ಸುಕುಮಾರ್ ಶೆಟ್ಟಿಯನ್ನು ಕೂಡಲೇ ಬಂದಿಸಬೇಕು. ಆಕೆಗೆ ನ್ಯಾಯ ಒದಗಿಸಬೇಕು" ಎಂದು ಸಂತ್ರಸ್ತ ಯುವತಿಯ ಭಾವ ಉಮೇಶ್ ಒತ್ತಾಯ ಪಡಿಸಿದ್ದಾರೆ.


ವಕೀಲ ಸುಕುಮಾರ್ ಶೆಟ್ಟಿ


ಅವರು ಇಂದು ಉಡುಪಿ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, "ಡಿಸೆಂಬರ್ 13ರಂದು ಉಡುಪಿ ಮಹಿಳಾ ಪೋಲಿಸ್ ಠಾಣೆಯಲ್ಲಿ ಈಗಾಗಲೇ ಕೇಸು ದಾಖಲಾಗಿದ್ದು ತನಿಖೆ ಮಾತ್ರ ನಿಧಾನಗತಿಯಲ್ಲಿ ಸಾಗುತ್ತಿದೆ. ಅಲ್ಲದೆ ಪದೇ ಪದೇ ಬಂದು ಮನೆಯವರಿಗೆ ತನಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಅಲ್ಲದೆ ಆತನ ಸ್ನೇಹಿತರು ಆಗಾಗ ಯುವತಿಗೆ ಕರೆ ಮಾಡಿ ಬೆದರಿಸುತ್ತಿದ್ದಾರೆ. ಆತನು ರಾಜಕೀಯ ಪ್ರಭಾವದಿಂದ ಮೆರೆಯುತ್ತಿದ್ದಾರೆ. ಅಲ್ಲದೆ ಪೋಲಿಸರು ಕೂಡ ಈ ವಿಚಾರದಲ್ಲಿ ಕೈ ಜೋಡಿಸಿದ್ದಾರೆ. ಈಗಾಗಲೇ ಜಿಲ್ಲಾ ಎಸ್ಪಿ ವಿಷ್ಣುವರ್ಧನ್ ಅವರಿಗೆ ಕೂಡ ತನಿಖೆ ತೀವ್ರ ಗೊಳಿಸುವಂತೆ ಮನವಿ ಮಾಡಲಾಗಿದೆ" ಎಂದು ಹೇಳಿದರು.
"ಎರಡು ವರ್ಷದ ನಂತರ ಆಕೆಯ ಪ್ರೀತಿಯ ವಿಷಯ ಯುವತಿ ಮನೆಯವರಿಗೆ ಗೊತ್ತಾಗಿದ್ದು, ಒಪ್ಪಿಗೆ ಕೂಡ ಸಿಕ್ಕಿತ್ತು. ಈ ಹಿಂದೆ ಎಪ್ರಿಲ್ 2020 ಕ್ಕೆ ವಿವಾಹವಾಗುತ್ತೇನೆ ನಂಬಿಸಿ ಫೆಬ್ರವರಿಯ ನಂತರ ಆತ ಮದುವೆ ವಿಚಾರ ಎತ್ತಿದಾಗ ಜಾತಿ ವಿಷಯ, ತಂದೆ ತಾಯಿಯ ಒಪ್ಪಿಗೆ ಇಲ್ಲ ಎಂಬ ನೆಪ ಒಡ್ಡಿ ಮದುವೆ ವಿಚಾರದಿಂದ ಜಾರಿಕೊಳ್ಳುತ್ತಿದ್ದಾನೆ. ಜುಲೈಯಲ್ಲಿ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ದೈಹಿಕ ಹಿಂಸೆ ನೀಡಿರುತ್ತಾರೆ. ಆತನ ತಮ್ಮ ಸ್ಥಳೀಯ ಚುನಾವಣೆಗೆ ನಿಲ್ಲುವುದಕ್ಕೆ ಈ ವಿಚಾರ ಎತ್ತಿದ್ದೇವೆ ಎಂಬ ಸುಳ್ಳು ಆರೋಪ ಕೂಡ ಮಾಡುತ್ತಿದ್ದಾನೆ" ಎಂದು ಹೇಳಿದರು.
"ಇತ್ತೀಚೆಗೆ ಆತ ತನ್ನ ಪ್ರಭಾವ ಬಳಸಿ ಆಂಟಿಸಿಪೇಟರಿ ಬೇಲ್ಗೆ ಅರ್ಜಿ ಹಾಕಿದ್ದೇವೆ. ಆತನನ್ನು ಬಂಧನ ಮಾಡದಿದ್ದರೆ, ಮುಂದೆ ಸಂಘಟನೆಯ ಮುಖಾಂತರ ಹೋರಾಟ ಮಾಡುತ್ತೇವೆ. ನಮಗೆ ಯಾವುದೇ ರಾಜಕೀಯ ಬೇಕಿಲ್ಲ. ಆತನೊಂದಿಗೆ ತನ್ನ ನಾದಿನಿ ಮಾದುವೆಯಾಗುವುದಕ್ಕೆ ಒಪ್ಪಿಗೆ ಇಲ್ಲ. ಆತನ ಬೆದರಿಕೆ, ಬೇಡಿಕೆ ವಿಚಾರಕ್ಕೆ ಸಂಬಂದಿಸಿ ಸರಿಯಾದ ದಾಖಲೆ ನಮ್ಮಲ್ಲಿದೆ. ನಾವು ಹೀಗೆ ಮುಂದುವರಿಯಲು ಬಿಡಲ್ಲ. ಪೋಲಿಸ್ ಇಲಾಖೆ ಆತನನ್ನು ಬಂಧಿಸಿ ಬೇರೆ ಹೆಣ್ಣು ಮಕ್ಕಳಿಗೆ ಮೋಸವಾಗಬಾರದು" ಎಂದು ಒತ್ತಾಯಿಸಿದರು.
ಸಂತ್ರಸ್ತ ಯುವತಿ ಮಾತನಾಡಿ, "ಆತ ಕಳೆದ ಆರು ವರ್ಷದಿಂದಲೂ ನನ್ನ ಪರಿಚಯ ಹೊಂದಿದ್ದು, ಇತ್ತಿಚೇಗೆ ಆತನ ಕಲ್ಲುಕೋರೆ ನಡೆಸುವ ಜಾಗಕ್ಕೆ ಕರೆದುಕೊಂಡು ಬಲಾತ್ಕಾರದಿಂದ ದೈಹಿಕ ಸಂಪರ್ಕ ಮಾಡಿದ್ದಾನೆ. ಅಲ್ಲದೆ, ದೈಹಿಕ ಹಿಂಸೆ ಕೂಡ ನೀಡಿದ್ದಾರೆ. ಆತನಿಗೆ ಇನ್ನು ಕೆಲವು ಯುವತಿಯರ ನಡುವೆ ಆಕ್ರಮ ಸಂಬಂಧ ಇರುವುದು ಗೊತ್ತಾಗಿದೆ. ಆದರೆ ಅವರಿಗೆ ನನ್ನಂತೆ ಮೋಸವಾಗಬಾರದು. ಆ ದೃಷ್ಟಿಯಿಂದ ತಲೆಮರೆಸಿಕೊಂಡ ಆತನನ್ನು ಕೂಡಲೇ ಬಂಧಿಸಬೇಕು" ಎಂದು ಸಂತ್ರಸ್ತ ಯುವತಿ ಒತ್ತಾಯ ಪಡಿಸಿದ್ದಾರೆ.