ಕಾರ್ಕಳ,ಡಿ.21 (DaijiworldNews/HR): ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿ ಕಳೆದ 27 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡ ಆರೋಪಿಯೊಬ್ಬನ್ನು ಕಾರ್ಕಳ ನಗರ ಠಾಣಾ ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮೂಡಬಿದಿರೆ ಅಲಂಗಾರಿನ ಇಮ್ತಿಯಾಜ್ ಎಂದು ಗುರುತಿಸಲಾಗಿದೆ.
1993 ಆಗಸ್ಟ್ 25ರಂದು ಆರೋಪಿಗಳಾದ ಲಕ್ಷಣ ಮಲ್ಯ, ವಿವೇಕಾನಂದ ಮಲ್ಯ, ದಯಾನಂದ ಮಲ್ಯ, ಇಮ್ತಿಯಾಜ್, ನಿರಂಜನ ಶೆಟ್ಟಿ, ಪ್ರಸನ್ನ, ಸುನಿಲ್ ಪೈ, ವೀರೇಂದ್ರ ಎಂಬವರು ಕಾರ್ಕಳ ನಗರದ ಅನಂತಶಯನ ದೇವಸ್ಥಾನ ಪರಿಸರದ ಕ್ಲಿನಿಕ್ವೊಂದಕ್ಕೆ ಅಕ್ರಮವಾಗಿ ಪ್ರವೇಶಗೈದು ಕರ್ತವ್ಯ ನಿರತರಾಗಿದ್ದ ಕ್ಲಿನಿಕ್ನ ಮಾಲಿಕರಾಗಿದ್ದ ಡಾ. ಸುರೇಶ್ ಕುಡ್ವ ಎಂಬವವರಿಗೆ ಜೀವ ಬೆದರಿಕೆಯೊಡ್ಡಿ, 5 ನಿಮಿಷದೊಳಗಾಗಿ ಕ್ಲಿನಿಕ್ ಖಾಲಿ ಮಾಡುವಂತೆ ಬೆದರಿಕೆಯೊಡ್ಡಿದ್ದರು. ಅದೇ ಸಂದರ್ಭದಲ್ಲಿ ಆರೋಪಿಗಳು ದಾಂಧಲೆ ನಡೆಸಿ ವೈದ್ಯಕೀಯ ಸಲಕರಣೆ ಹಾಗೂ ಕ್ಲಿನಿಕ್ನ ಹೊರಭಾಗದಲ್ಲಿ ನಿಲ್ಲಿಸಿದ್ದ ಸ್ಕೂಟರ್ ವೊಂದನ್ನು ಹಾನಿ ಉಂಟುಮಾಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದು ಎಲ್ಲಾ ಆರೋಪಿಗಳನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿ,ಆರೋಪಿತ ವಿರುದ್ಧ ಕಾರ್ಕಳ ನ್ಯಾಯಾಲಯದಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು.
ಜಾಮೀನು ಪಡೆದುಕೊಂಡಿದ್ದ ಆರೋಪಿ ಇಮ್ತಿಯಾಜ್ ವಿಚಾರಣೆಯ ವೇಳೆಗೆ ನ್ಯಾಯಾಲಯಕ್ಕೆ ಹಾಜರಾಗದೇ ವಿದೇಶಕ್ಕೆ ಪರಾರಿಯಾಗಿದ್ದನು. ಆತನ ವಿರುದ್ಧ ವಾರಂಟ್ ಜಾರಿಗೊಂಡಿತ್ತು. ಉಳಿದ ಆರೋಪಿಗಳನ್ನು ನ್ಯಾಯಾಲಯವು ದೋಷ ಮುಕ್ತಗೊಳಿಸಿದೆ.
ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕ ಸಂಪತ್ ಕುಮಾರ್ ಅವರ ಆದೇಶದ ಮೇರೆಗೆ ನಗರ ಠಾಣಾಧಿಕಾರಿ ಮಧು ಬಿ.ಇ ಅವರ ನೇತೃತ್ವದಲ್ಲಿ ಕಾರ್ಕಳ ನಗರ ಠಾಣಾ ಅಪರಾಧ ವಿಭಾಗದ ಸಬ್ ಇನ್ಸ್ಪೆಕ್ಟರ್ ದಾಮೋದರ್ ಕೆ.ಬಿ. ಎಎಸೈ ರಾಜೇಶ್, ಕಾನ್ಸ್ಟೇಬಲ್ಗಳಾದ ಘನ ಶ್ಯಾಮ್, ರಾಘವೇಂದ್ರ ಶೆಟ್ಟಿ ಅವರು ಜಂಟೀ ಕಾರ್ಯಚರಣೆ ನಡೆಸಿ ಆರೋಪಿಯನ್ನು ಮಂಗಳೂರಿನಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.