ಉಳ್ಳಾಲ,ಡಿ.21 (DaijiworldNews/HR): ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ತಜ್ಞ ವೈದ್ಯರುಗಳ ತಂಡದಿಂದ ನಾಲ್ಕು ವರ್ಷದ ಬಾಲಕನ ಕಾಲಿನ ತೊಡೆಯಲ್ಲಿ ಎಲುಬಿನ ಅಸ್ಥಿಮಜ್ಜೆಯ ಕ್ಯಾನ್ಸರಿನ ಅಪರೂಪದ ಯಶಸ್ವಿ ಶಸ್ತ್ರಕ್ರಿಯೆಯನ್ನು ನಡೆಸಲಾಗಿದೆ ಎಂದು ಕ್ಯಾನ್ಸರ್ ತಜ್ಞ ಡಾ. ಜಲಾಲುದ್ದೀನ್ ಹೇಳಿದ್ದಾರೆ.


ಈ ಬಗ್ಗೆ ಆಸ್ಪತ್ರೆಯಲ್ಲಿ ಸೋಮವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ಅಪರೂಪದ ಹಾಗೂ ಸಣ್ಣ ಮಕ್ಕಳಿಗೆ ಈ ರೀತಿಯ ಶಸ್ತ್ರಕ್ರಿಯೆಯನ್ನು ನಡೆಸಿರುವುದು ಅಂಕಿಅಂಶಗಳ ಆಧಾರದಲ್ಲಿ ಭಾರತದಲ್ಲಿಯೇ ಪ್ರಥಮವಾಗಿದೆ. ಶಸ್ತ್ರಚಿಕಿತ್ಸೆಗೆ ಒಳಪಟ್ಟ ಮಗುವಿನ ಕುಟುಂಬದವರು ಭಾರತದಾದ್ಯಂತ ಹಲವು ಪರಿಣಿತ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞರನ್ನು ಸಂದರ್ಶಿಸಿದಾಗ ಕ್ಯಾನ್ಸರ್ ಬಾಧಿತ ಕಾಲಿನ ಭಾಗವನ್ನು ತುಂಡರಿಸುವುದು ಒಂದೇ ಪರಿಹಾರ ಎಂದು ತಿಳಿಸಿದಾಗ ಭಯಗೊಂಡ ಕುಟುಂಬ ಸದಸ್ಯರು ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸ ವಿಭಾಗದ ಮುಖ್ಯಸ್ಥ ಜಲಾಲುದ್ದೀನ್ ಅವರನ್ನು ಭೇಟಿ ಮಾಡಿದ್ದರು.
ಇದನ್ನು ಜಲಾಲುದ್ದೀನ್ ಅವರು ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ಉಪವಕುಲಪತಿ ಡಾ. ವಿಜಯಕುಮಾರ್ ಅವರ ಮಾರ್ಗದರ್ಶನದಲ್ಲಿ , ಇದನ್ನೊಂದು ಸವಾಲಾಗಿ ಸ್ವೀಕರಿಸಿ ಅವರ ಸಲಹೆಯಂತೆ ಕಾಲು ಕತ್ತರಿಸದೆಯೇ ಚಿಕಿತ್ಸೆ ನೀಡಲು ಸಾಧ್ಯವೆಂದು ತಿಳಿಸಿದ್ದಾರೆ. ಅದರಂತೆ ಅದಕ್ಕಾಗಿ ತಗಲುವ ಲೋಹದ ಇಂಪ್ಲಾಟನ್ನು ತಯಾರಿಸುವ ಹಲವು ಕಂಪೆನಿಗಳೊಂದಿಗೆ ವಿಚಾರಿಸಿ ಜರ್ಮನಿಯ ಕಂಪನಿಯೊಂದು 30 ಲಕ್ಷ ರೂ. ಹಾಗೂ ಚೆನ್ನೈಯ ಕಂಪೆನಿಯೊಂದು ಅದನ್ನು ಲಕ್ಷಗಳಿಗೆ ಒದಗಿಸಿ ಕೊಡಬಹುದೆಂದು ತಿಳಿಸಿದಾಗ ಆಸ್ಪತ್ರೆಯ ಟ್ಯೂಮರ್ ಬೋರ್ಡಿನೊಂದಿಗೆ ಸಮಾಲೋಚನೆ ನಡೆಸಿ ಈ ಸಂಕೀರ್ಣ ಶಸ್ತ್ರಕ್ರಿಯೆಯನ್ನು 1.5 ಲಕ್ಷ ವೆಚ್ಚದಲ್ಲಿ ಸತತ 6 ಗಂಟೆಗಳ ಕಾಲ ಶಸ್ತ್ರಕ್ರಿಯೆಯನ್ನು ನಿರ್ವಹಿಸಿ ಮಗುವಿನ ಕಾಲು ಮತ್ತು ಜೀವವನ್ನು ರಕ್ಷಿಸಲು ಅವರಿತ ಶ್ರಮಿಸಿ ಯಶಸ್ವಿಯಾಗಿದ್ದೇವೆ ಎಂದರು.
ಇಂತಹ ಶಸ್ತ್ರಕ್ರಿಯೆಯು ಅಪರೂಪ ಮತ್ತು ಸವಾಲಿನಿಂದ ಕೂಡಿದ್ದು ಶಸ್ತ್ರಕ್ರಿಯೆಯನ್ನು ನಡೆಸಿದಾಗ ಎರಡೂ ಕಾಲುಗಳ ಸಮತೋಲನವನ್ನು ಕಾಪಾಡುವಂತೆ ಮುಂದಿನ ಜೀವಿತಾವಧಿಯಲ್ಲಿ ಯಾವುದೇ ಅಹಿತಕರ ಸನ್ನಿವೇಶಗಳಾಗದಂತೆ ಮುನ್ನೆಚ್ಚರಿಕೆ ವಹಿಸಿವುದು ಅಗತ್ಯ. ಈ ತರಹದ ಕ್ಯಾನ್ಸರ್ ಪೀಡಿತ ಕಾಲಿನ ಅಂಗ ನೂನ್ಯತೆ ಸರಿಪಡಿಸುವ ಶಸ್ತ್ರ ಚಿಕಿತ್ಸೆ ನಡೆಸಿರುವುದು ದುಬಾರಿಯೊಂದಿಗೆ ಬಹಳ ವಿರಳ ಹಾಗೂ ಇನ್ನಷ್ಟು ಸಣ್ಣ ವಯಸ್ಸಿನ ಮಗುವಿನ ಕಾಲು ಕತ್ತರಿಸಿ ಚಿಕಿತ್ಸೆ ನೀಡುವ ಬದಲು ಈ ನಮೂನೆಯ ಶಸ್ತ್ರಚಿಕಿತ್ಸೆ ನೆರವೇರಿಸಿ ಮಗುವಿನ ಜೀವ ಕಾಪಾಡುವುದು ಅತ್ಯಂತ ಪರಿಣಿತ ವೈದ್ಯರುಗಳ ತಂಡದಿಂದ ಮಾತ್ರ ಸಾಧ್ಯ. ಇದು ಮಂಗಳೂರಿನ ಯೆನೆಪೋಯ ಮೆಡಿಕಲ್ ಕಾಲೇಜು ಕ್ಯಾನ್ಸರ್ ಸೆಂಟರಿನ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದಿಂದ ನಡೆದಿರುವುದು ಹೆಮ್ಮೆಯ ವಿಷಯವಾಗಿ ಎಂದು ಹೇಳಿದ್ದಾರೆ.
ಈ ಅಪರೂಪದ ಹಾಗೂ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯಲ್ಲಿ ಯೆನೆಪೋಯ ಕ್ಯಾನ್ಸರ್ ಸೆಂಟರಿನ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ಡಾ.ರೋಹನ್ ಶೆಟ್ಟಿ , ಡಾ.ಅಮರ್ ರಾವ್ , ಡಾ. ನೂರ್ ಮೊಹಮ್ಮದ್ ಆರ್ಥೋಪೆಡಿಕ್ಸ್ ವಿಭಾಗ ಮುಖ್ಯಸ್ಥ ಡಾ. ಇಮ್ತಿಯಾಜ್ ಅಹ್ಮದ್ , ಡಾ. ಅಭಿಷೇಕ್ ಶೆಟ್ಟಿ , ಅರಿವಳಿಕೆ ವಿಭಾಗದ ಡಾ. ಏಜಾಝ್ , ಮಕ್ಕಳ ತಜ್ಞರ ಡಾ. ಮಿಥುನ್ ಪಾಲ್ಗೊಂಡಿದ್ದರು.