ಕಾರ್ಕಳ, ಡಿ.22 (DaijiworldNews/MB) : ''ಮಂಗಳೂರು-ಕಾರ್ಕಳ-ಶೃಂಗೇರಿ ಸಂಪರ್ಕದ ರೈಲ್ವೇ ಯೋಜನೆ ರೂಪಿತಗೊಳ್ಳುತ್ತಿದೆ. ಕಡೂರು ಜಂಕ್ಷನ್ನಿಂದ ಶೃಂಗೇರಿವರೆಗೆ ಸರ್ವೇ ಕಾರ್ಯ ನಡೆದಿದೆ'' ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಬಿಜೆಪಿ ಕಛೇರಿಯಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
''ಕೇಂದ್ರ ಸರಕಾರದಿಂದ ಕಾರ್ಕಳಕ್ಕೆ ಸಿಆರ್ಎಫ್ / ಗ್ರಾಮ ಸಡಕ್ ಯೋಜನೆಗಳಲ್ಲಿ ಹಲವಾರು ಅಭಿವೃದ್ಧಿ ಕಾರ್ಯ ಕೈಗೊಂಡಿವೆ. ಬಹಳಷ್ಟು ರಾಜ್ಯ ಹೆದ್ದಾರಿಗಳು ರಾಷ್ಟ್ರೀಯ ಹೆದ್ದಾರಿಗಳಾಗಿ ಪರಿವರ್ತನೆಗೊಂಡಿದೆ. ಕಸ್ತೂರಿರಂಗನ್ ಯೋಜನೆಯಿಂದ ರೈತರಿಗೆ ಯಾವುದೇ ಸಮಸ್ಸೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು'' ಎಂದರು.
ರೈತರ ಹೋರಾಟ ರಾಜಕೀಯ ಪ್ರೇರಿತ
''ಕೃಷಿ ನೀತಿ ಜಾರಿಗೊಂಡು 2-3 ತಿಂಗಳ ನಂತರ ಹೋರಾಟ ನಡೆಯುತ್ತಿದೆ. ಇದರ ಹಿಂದೆ ರಾಜಕೀಯ ಹಾಗೂ ರಾಷ್ಟ್ರ ವಿರೋಧಿ ಶಕ್ತಿಗಳು ಕೈಜೋಡಿಸಿದೆ. ರೈತರ ಹೋರಾಟದಲ್ಲಿ ಖಲಿಸ್ತಾನ ಭಯೋತ್ಪಾದಕರ ಬಿಡುಗಡೆ ವಿಷಯಗಳು ಪ್ರಸ್ತುತ ಆತಂಕಕಾರಿ ವಿಷಯ. ಇದಕ್ಕೆ ಇಂಬು ನೀಡುವಂತೆ ರೈತರ ಹೋರಾಟಕ್ಕೆ ಕೆನಡಾ ರಾಷ್ಟ್ರ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿದೆ. ಆ ದೇಶದ ಸಂಸತ್ನಲ್ಲಿ 338 ಸದಸ್ಯರ ಪೈಕಿ 18 ಮಂದಿ ಸಿಖ್ ಸಮುದಾಯದವರು. ಅವರ ಪ್ರಭಾವಕ್ಕೆ ಒಳಗಾಗಿ ಕೆನಡಾ ನೀಡಿರುವ ಈ ಹೇಳಿಕೆಯು ನಮ್ಮ ರಾಷ್ಟ್ರದ್ರೋಹದಾಗಿದೆ'' ಎಂದು ಖಾರ ಪ್ರತಿಕ್ರಿಯೆ ನೀಡಿದರು.
ಕೇರಳದಲ್ಲಿ ಎಪಿಎಂಸಿ ಇಲ್ಲ!
''ಕೃಷಿ ನೀತಿ ಕುರಿತು ಮಾತನಾಡುವ ವಾಮರಂಗಗಳು ತಮ್ಮ ಅಧಿಕಾರಿ ನಡೆಸುತ್ತಿರುವ ಕೇರಳದಲ್ಲಿ ಎಪಿಎಂಸಿ ಇಲ್ಲ. ಕೇಂದ್ರ ಬಿಲ್ ಪಾಸ್ಗೆ ಮುನ್ನ ವಿಸ್ತೃತ ಚರ್ಚೆಯಾಗಿತ್ತು. ಕೃಷಿ ಬಿಲ್ ಸ್ಟ್ಯಾಂಡ್ ಕಮಿಟಿಯಲ್ಲಿ ಚರ್ಚೆಯಾಗಿದೆ. ವಿಸ್ತೃತ ಚರ್ಚೆಯಾದ ಬಿಲ್ಲನ್ನು ಈಗ ವಿರೋಧ ಮಾಡಲಾಗುತ್ತದೆ. ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಧಿಕಾರದಲ್ಲಿ ಇದ್ದಾಗ ಎಪಿಎಂಸಿ ತಿದ್ದುಪಡಿಯ ಕುರಿತು ಪ್ರಣಾಳಿಕೆಯಲ್ಲಿ ತಿಳಿಸಿತು. ಡಿಎಂಕೆ 2016ರಲ್ಲಿ ಎಪಿಎಂಸಿ ತಿದ್ದುಪಡಿ ತರುವುದಾಗಿ ಹೇಳಿತು. 2010ರಲ್ಲಿ ಕೇಂದ್ರ ಸಚಿವರಾಗಿದ್ದ ಶರತ್ ಪವಾರ್ ಎಪಿಎಂಸಿ ತಿದ್ದುಪಡಿ ಕುರಿತು ಮುಖ್ಯಮಂತ್ರಿಗಳ ಅಭಿಪ್ರಾಯಗಳನ್ನು ಕ್ರೋಡಿಕರಿಸಿದರು. ರಾಹುಲ್ಗಾಂಧಿ ಅವರು ಎಪಿಎಂಸಿಯಲ್ಲಿ ಹಣ್ಣು ತರಕಾರಿಗಳನ್ನು ಹೊರತುಪಡಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಕೇಜ್ರಿವಾಲ್ ಅವರು ಕೂಡಾ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಕೃಷಿ ನೀತಿ ಪರ ಇದ್ದರು. ಆದರೆ ಈಗ ಎಲ್ಲರೂ ಸೇರ್ಪಡೆಗೊಂಡು ಕೃಷಿ ನೀತಿ ವಿರೋಧಿಸುತ್ತಿರುವುದು ದುರದೃಷ್ಟಕರ'' ಎಂದು ಹೇಳಿದರು.
ಗೋ ಹತ್ಯೆ-ಮತಾಂತರ
''ದೇಶದಲ್ಲಿ ಮತಾಂತರದ ಬಗ್ಗೆ ಮೊಟ್ಟಮೊದಲ ಬಾರಿ ತಮ್ಮ ರಾಜ್ಯ ಮತಾಂತರ ನಿಷೇಧ ಕಾಯಿದೆ ಒತ್ತು ನೀಡಿದವರು ತಮಿಳು ನಾಡಿದ ಅಂದಿನ ಮುಖ್ಯಮಂತ್ರಿ ಜಯಲಲಿತಾ. ಗೋ -ಹತ್ಯೆ ನಿಷೇಧ ಕಾಯಿದೆ 2008ರಲ್ಲಿ ಜಾರಿಗೆ ತರುವ ಪ್ರಯತ್ನ ಮಾಡಿದರೂ ಆಗ ಅಂಕಿತಕ್ಕಾಗಿ ರಾಜ್ಯಪಾಲರು ರಾಷ್ಟ್ರಪತಿಗೆ ಕಳುಹಿಸಿರುವುದರಿಂದ ಅದು ನೆನೆಗುದ್ದಿಗೆ ಬಿತ್ತು. ಈಗ ಅಂತಿಮ ಹಂತದಲ್ಲಿದೆ. ಗೋ -ಹತ್ಯೆ ಕಾನೂನು ಅನುಷ್ಠಾನ ರಾಜ್ಯ ಸರಕಾರದಿಂದಲೇ ಆಗಬೇಕು ಹೊರತು ಕೇಂದ್ರದಿಂದಲ್ಲ'' ಎಂದರು.
ಶಾಸಕ ಹಾಗೂ ಸರಕಾರದ ಮುಖ್ಯ ಸಚೇತಕ ವಿ.ಸುನೀಲ್ ಕುಮಾರ್, ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆ, ನಗರಾಧ್ಯಕ್ಷ ಅನಂತಕೃಷ್ಣ ಶೆಣೈ, ಪುರಸಭಾ ಅಧ್ಯಕ್ಷೆ ಸುಮ, ಉಪಾಧ್ಯಕ್ಷೆ ಪಲ್ಲವಿ ರಾವ್, ನಿಕಟಪೂರ್ವ ವಕ್ತಾರ ಹರೀಶ್ ಶೆಣೈ, ನವೀನ್ ನಾಯಕ್, ರವೀಂದ್ರ ಕುಮಾರ್ ಉಪಸ್ಥಿತರಿದ್ದರು.