ಮಂಗಳೂರು, ಡಿ.23 (DaijiworldNews/PY): ಇಂಗ್ಲೆಂಡ್ನಲ್ಲಿ ರೂಪಾಂತರಿತ ಹೊಸ ಕೊರೊನಾ ವೈರಸ್ ಪತ್ತೆಯಾಗಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಇಂಗ್ಲೆಂಡ್ನಿಂದ ದ.ಕ ಜಿಲ್ಲೆಗೆ ಆಗಮಿಸಿದವರ ಮಾಹಿತಿ ಕಲೆಹಾಕುವ ಕಾರ್ಯವನ್ನು ಜಿಲ್ಲಾಡಳಿತ ಮಾಡುತ್ತಿದೆ. ಡಿ.7ರಿಂದ ಇಲ್ಲಿಯವರೆಗೆ 56 ಮಂದಿ ಯುಕೆಯಿಂದ ದ.ಕ ಜಿಲ್ಲೆಗೆ ಆಗಮಿಸಿದ್ದಾರೆ. ಡಿ.21ರಂದು ಎಂಟು ಅಂತರಾಷ್ಟ್ರೀಯ ಪ್ರಯಾಣಿಕರು ಉಡುಪಿ ಜಿಲ್ಲೆಗೆ ಆಗಮಿಸಿದ್ದರು. ಈ ಪೈಕಿ ಐವರು ಯುಕೆ ಇಬ್ಬರು ಕೆನಡಾ ಹಾಗೂ ಐರ್ಲೆಂಡ್ನಿಂದ ಬಂದವರಾಗಿದ್ದಾರೆ.

ಸಾಂದರ್ಭಿಕ ಚಿತ್ರ
"ಇವೆರೆಲ್ಲರಿಗೂ ಹೋಂ ಕ್ವಾರಂಟೈನ್ ವಿಧಿಸಲಾಗಿದೆ. ಈ ಪ್ರಯಾಣಿಕರು ಬೆಂಗಳೂರಿಗೆ ಬಂದು ನಂತರ ಬಸ್ಸು ಅಥವಾ ವಿಮಾನದಲ್ಲಿ ಇಲ್ಲಿಗೆ ಆಗಮಿಸಿದ್ದಾರೆ. ಈ ಪೈಕಿ ಹಲವು ಮಂದಿ ಡಿ.21ರಂದು ಆಗಮಿಸಿದ್ದಾರೆ" ಎಂದು ದ.ಕ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಚಂದ್ರ ಬಾಯರಿ ಹೇಳಿದ್ದಾರೆ.
"ಎಲ್ಲರೂ ಕೂಡಾ ಅಲ್ಲಿ ಪರೀಕ್ಷೆಗೊಳಪಟ್ಟು ವರದಿ ನೆಗೆಟಿವ್ ಬಂದ ನಂತರ ಆಗಮಿಸಿದ್ದಾರೆ. ಆದರೆ, ಮುನೆಚ್ಚರಿಕಾ ಕ್ರಮವಾಗಿ ಹಾಗೂ ನಿಯಮದ ಅನ್ವಯ ಎಲ್ಲರನ್ನೂ ಕೂಡಾ ಪರೀಕ್ಷೆಗೆ ಒಳಪಡಿಸಲಾಗುತ್ತದೆ. 56 ಮಂದಿಯ ಪೈಕಿ ಹೆಚ್ಚಿನವರು ಮಂಗಳೂರು, ಬಂಟ್ವಾಳ ಮೂಲದವರಾಗಿದ್ದಾರೆ" ಎಂದು ತಿಳಿಸಿದ್ದಾರೆ.
"ಮುನ್ನೆಚ್ಚರಿಕಾ ಕ್ರಮವಾಗಿ ಡಿ.23ರಂದು ಆರೋಗ್ಯ ಇಲಾಖೆ ಅವರಿಗೆ ಮತ್ತೆ ಆರ್ಟಿಪಿಸಿಆರ್ ಪರೀಕ್ಷೆಗಳನ್ನು ಮಾಡಲು ಯೋಜಿಸಿದೆ. ಯುಕೆಯಿಂದ ಬಂದವರೆಲ್ಲರೂ ಕೂಡಾ ಕ್ವಾರಂಟೈನ್ ನಿಯಮವನ್ನು ಅನುಸರಿಸಿದ್ದಾರೆ. ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸಮಯದಲ್ಲಿ ತಮ್ಮ ಕುಟುಂದವರನ್ನು ಭೇಟಿ ಮಾಡಲು ಬಂದಿದ್ದಾರೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಗಂಟಲ ದ್ರವ ಮಾದರಿ ಪರೀಕ್ಷೆ ನಡೆಯಲಿದೆ. ಪಾಸಿಟಿವ್ ಬಂದಲ್ಲಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ನೆಗೆಟಿವ್ ಬಂದಲ್ಲಿ 14 ದಿನಗಳ ಹೋಂಕ್ವಾರಂಟೈನ್ಗೆ ಒಳಪಡಿಸಲಾಗುತ್ತದೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಜನರು ಈ ವಿಚಾರವಾಗಿ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಲಾಣಾಧಿಕಾರಿ (9449843050), ನೋಡಲ್ ಅಧಿಕಾರಿ (9972343984), ಜಿಲ್ಲಾ ಸವೇಕ್ಷಣಾಧಿಕಾರಿ (9448887706) ಅವರನ್ನು ಸಂಪರ್ಕಿಸಬಹುದು.
ಏತನ್ಮಧ್ಯೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಹಾರಾಷ್ಟ್ರ, ಹೈದರಾಬಾದ್, ಬೆಂಗಳೂರು, ಮುಂಬೈ, ಚೆನ್ನೈ ಹಾಗೂ ಕೇರಳ ರಾಜ್ಯಗಳಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ಮುಖೇನ ದ.ಕ ಜಿಲ್ಲೆಗೆ ಡಿ.7ರಿಂದ ಆಗಮಿಸಿರುವ ಎಲ್ಲಾ ಪ್ರಯಾಣಿಕರ ಪಟ್ಟಿಯನ್ನು ತಯಾರಿಸಿ, ಮುಂಜಾಗ್ರತಾ ಕ್ರಮವನ್ನು ಅನುಸರಿಸಲಾಗುತ್ತಿದೆ.