ಮಂಗಳೂರು/ಉಡುಪಿ, ಡಿ.23 (DaijiworldNews/MB) : ಬ್ರಿಟನ್ನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಡಿಸೆಂಬರ್ 7 ರಿಂದ ಡಿಸೆಂಬರ್ 22 ರ ನಡುವೆ ಆಗಮಿಸಿದ ಎಲ್ಲಾ 58 ಜನರನ್ನು ಆರೋಗ್ಯ ಇಲಾಖೆ ಡಿಸೆಂಬರ್ 23 ರಂದು ಸಂಪರ್ಕಿಸಿ, ದ್ರವದ ಮಾದರಿಯನ್ನು ಪ್ರಾರಂಭಿಸಿದೆ.

ಇಲ್ಲಿಯವರೆಗೆ 58 ರಲ್ಲಿ ಮೂರು ಜನರಿಗೆ ನೆಗೆಟಿವ್ ಆಗಿದೆ. ಅವರನ್ನು 14 ದಿನಗಳವರೆಗೆ ಹೋಂ ಕ್ವಾರಂಟೈನ್ಗೆ ಒಳಪಡಿಸಲಾಗುತ್ತದೆ. ಕೊರೊನಾ ಪಾಸಿಟಿವ್ ಬಂದವರನ್ನು ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರು ಡಿಸೆಂಬರ್ 23 ರಿಂದ ಕಡ್ಡಾಯವಾಗಿ ಆರ್ಟಿಪಿಸಿಆರ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.
ಏತನ್ಮಧ್ಯೆ, ಯುಕೆಯಿಂದ ಉಡುಪಿಗೆ ಆಗಮಿಸಿದವರ ಕೊರೊನಾ ಪರೀಕ್ಷೆ ವರದಿ ನೆಗೆಟಿವ್ ಆಗಿದೆ. ಎಂಟು ಜನರು ಇತ್ತೀಚೆಗೆ ಯುಕೆಯಿಂದ ನಗರಕ್ಕೆ ಆಗಮಿಸಿದ್ದರು. ಇಂಗ್ಲೆಂಡ್ನಲ್ಲಿ ಕೊರೊನಾ ಹೊಸ ಪ್ರಬೇಧದ ಕಂಡು ಬಂದ ಹಿನ್ನೆಲೆ ನಗರದ ಜನರಲ್ಲಿ ಆತಂಕ ಉಂಟಾಗಿತ್ತು. ಎಲ್ಲಾ ಎಂಟು ಜನರಿಗೂ ಕೊರೊನಾ ನೆಗೆಟಿವ್ ಆಗಿದ್ದು ಮುನ್ನೆಚ್ಚರಿಕೆ ಕ್ರಮವಾಗಿ 14 ದಿನಗಳ ಕಾಲ ಹೋಂ ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಉಡುಪಿ ಜಿಲ್ಲೆಯ ಡಿಎಚ್ಒ, ಡಿಸೆಂಬರ್ 21 ರಂದು ಯುಕೆಯಿಂದ ಎಂಟು ಪ್ರಯಾಣಿಕರು ಆಗಮಿಸಿದ್ದರು. ಕುಂದಾಪುರದ ಒಬ್ಬರು, ಉಡುಪಿಯಿಂದ ನಾಲ್ವರು ಮತ್ತು ಕಾರ್ಕಳದ ಮೂವರ ಕೊರೊನಾ ಪರೀಕ್ಷೆ ನಡೆಸಲಾಗಿದೆ. ಕೊರೊನಾ ವರದಿ ನೆಗೆಟಿವ್ ಆದ ಕಾರಣ ಅವರ ಪ್ರಾಥಮಿಕ ಸಂಪರ್ಕವನ್ನು ಪತ್ತೆ ಹಚ್ಚುವ ಪ್ರಶ್ನೆಯಿಲ್ಲ. ಯಾವುದೇ ರೀತಿಯ ಕೊರೊನಾ ಲಕ್ಷಣಗಳು ಕಂಡುಬಂದರೆ, ಅವರನ್ನು ಮತ್ತೆ ಪರೀಕ್ಷಿಸಲಾಗುತ್ತದೆ. 14 ದಿನಗಳ ಹೋಂ ಕ್ವಾರಂಟೈನ್ ಬಳಿಕ ಎಲ್ಲಾ 8 ಮಂದಿಯನ್ನು ಮತ್ತೆ ಪರೀಕ್ಷಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ನವೆಂಬರ್ 25 ರಿಂದ ಇಂಗ್ಲೆಂಡ್ನಿಂದ ರಾಜ್ಯಕ್ಕೆ ಆಗಮಿಸಿರುವ ಪ್ರಯಾಣಿಕರ ಬಗ್ಗೆ ಕರ್ನಾಟಕ ಸರ್ಕಾರ ಮಾಹಿತಿ ಸಂಗ್ರಹಿಸುತ್ತಿದೆ. ಮುಖ್ಯವಾಗಿ ಬೆಂಗಳೂರು ಮತ್ತು ಮಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿಂದ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.