ಮಂಗಳೂರು, ಡಿ.23 (DaijiworldNews/MB) : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಗೌತಮ್ ಅದಾನಿ ಗುಂಪಿಗೆ ಹಸ್ತಾಂತರ ಗೊಂಡ ನಂತರ ಗುತ್ತಿಗೆ ಕಂಪೆನಿಗಳು ಕೊರೋನಾ ನಿಯಮಗಳ ನೆಪ ಮುಂದಿಟ್ಟು ಸ್ಥಳೀಯ ಕಾರ್ಮಿಕರನ್ನು ಕೆಲಸದಿಂದ ಬಲವಂತವಾಗಿ ಹೊರದಬ್ಬಿವೆ. ಆ ರೀತಿ ಕೈ ಬಿಟ್ಟಿರುವ ಅರವತ್ತಕ್ಕೂ ಹೆಚ್ಚು ಸ್ಥಳೀಯ ಕಾರ್ಮಿಕರನ್ನು ತಕ್ಷಣವೇ ಕೆಲಸಕ್ಕೆ ಮರು ನೇಮಕಗೊಳಿಸಬೇಕು, ಯಾವುದೇ ಕಾರಣಕ್ಕೂ ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿದ ಸಂತ್ರಸ್ತರನ್ನು, ಸ್ಥಳೀಯರನ್ನು ಕೆಲಸದಿಂದ ತೆಗೆದು ಹಾಕಬಾರದು, ಹೊಸ ನೇಮಕಾತಿಯಲ್ಲಿ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿ "ಮಂಗಳೂರು ವಿಮಾನ ನಿಲ್ದಾಣ ಖಾಸಗೀಕರಣ ವಿರೋಧಿ ಹೋರಾಟ ಸಮಿತಿ"ಯ ನಿಯೋಗ ಗುತ್ತಿಗೆ ಕಂಪೆನಿ ಏರ್ ಇಂಡಿಯಾ ಸಾಟ್ಸ್ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಸಲ್ಲಿಸಿತು.


ಗುತ್ತಿಗೆ ಕಂಪೆನಿ "ಏರ್ ಇಂಡಿಯಾ ಸಾಟ್ಸ್" ಕಳೆದ ಜೂನ್ ತಿಂಗಳಲ್ಲಿ ವಿಮಾನ ನಿಲ್ದಾಣದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅರವತ್ತಕ್ಕೂ ಹೆಚ್ಚು ಕಾರ್ಮಿಕರಿಂದ ಕೊರೋನ ನೆಪ ಮುಂದಿಟ್ಟು "ಸ್ವ ಇಚ್ಚೆಯ" ರಾಜಿನಾಮೆ ಪಡೆದುಕೊಂಡಿತ್ತು. ಮೂರು ತಿಂಗಳ ನಂತರ ಕೆಲಸಕ್ಕೆ ಮರು ನೇಮಕ ಮಾಡಿಕೊಳ್ಳುವುದಾಗಿ ಭರವಸೆ ನೀಡಿತ್ತು. ವಿಮಾನ ನಿಲ್ದಾಣಕ್ಕೆ ಭೂಮಿ ಕಳೆದು ಕೊಂಡ ಸಂತ್ರಸ್ತ ಕುಟುಂಬಗಳ ಸದಸ್ಯರು ಸೇರಿದಂತೆ ಸ್ಥಳೀಯ ಕಾರ್ಮಿಕರು ಅನಿವಾರ್ಯವಾಗಿ ಬಲವಂತದ ರಾಜಿನಾಮೆ ಪತ್ರ ನೀಡಿ ಕೆಲಸದಿಂದ ಹೊರಗುಳಿದಿದ್ದರು. ಆದರೆ ಆರು ತಿಂಗಳುಗಳು ಕಳೆದರೂ ಕಂಪೆನಿ ಕೆಲಸ ಕಳೆದು ಕೊಂಡವರನ್ನು ಮರು ನೇಮಕ ಮಾಡದೆ, ವಾರ್ಷಿಕ ಬೋನಸ್ ನೀಡದೆ ಬೀದಿಪಾಲು ಮಾಡಿದೆ. ಇದಲ್ಲದೆ ಅದಾನಿ ಗುಂಪಿಗೆ ವಿಮಾನ ನಿಲ್ದಾಣ ಹಸ್ತಾಂತರ ಗೊಂಡ ನಂತರ ಗುತ್ತಿಗೆ ಕಂಪೆನಿಗಳ ಒಪ್ಪಂದಗಳು ಹೊಸದಾಗಿ ಸಿದ್ದಗೊಳ್ಳುತ್ತಿದ್ದು, ಸಾವಿರದಷ್ಟಿರುವ ಸ್ಥಳೀಯ ಗುತ್ತಿಗೆ ಕಾರ್ಮಿಕರು ಕೆಲಸ ಕಳೆದು ಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಅದರ ಆರಂಭಿಕ ಲಕ್ಷಣಗಳು ಎಂಬಂತೆ ಸೆಕ್ಯುರಿಟಿ ಗುತ್ತಿಗೆಗೆ ಹೊಸ ಏಜನ್ಸಿಗಳು ಬಂದಿದ್ದು ಬಹುತೇಕ ಉತ್ತರ ಭಾರತದ ಕಾರ್ಮಿಕರನ್ನು ಸೆಕ್ಯೂರಿಟಿ ಗಾರ್ಡ್ ಗಳಾಗಿ ನೇಮಿಸಲಾಗಿದೆ.
ಈ ಹಿನ್ನಲೆಯಲ್ಲಿ ''ಮಂಗಳೂರು ವಿಮಾನ ನಿಲ್ದಾಣ ಖಾಸಗೀಕರಣ ವಿರೋಧಿ ಹೋರಾಟ ಸಮಿತಿ"ಯ ನಿಯೋಗ ಇಂದು ಗುತ್ತಿಗೆ ಕಂಪೆನಿ ಹಾಗು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಕೆಲಸದಿಂದ ಕೈ ಬಿಟ್ಟಿರುವ ಸ್ಥಳೀಯರನ್ನು ತಕ್ಷಣ ಮರು ನೇಮಕಗೊಳಿಸುವಂತೆ ಆಗ್ರಹಿಸಿತು. ಹಾಗೂ ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿದ ಸಂತ್ರಸ್ತರು ಸಹಿತ ಸ್ಥಳೀಯರನ್ನು ಯಾವುದೇ ಕಾರಣಕ್ಕೆ ಕೈ ಬಿಡಬಾರದು, ಹೊಸ ನೇಮಕಾತಿಗಳಲ್ಲಿ ಸ್ಥಳೀಯರಿಗರೇ ಉದ್ಯೋಗಗಳನ್ನು ಮೀಸಲಿಡಬೇಕು ಎಂದು ಒತ್ತಾಯಿಸಿತು. ನಿಯೋಗದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷರಾದ ಎಂ ದೇವದಾಸ್, ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಕಾರ್ಯದರ್ಶಿ ಸಂತೋಷ್ ಬಜಾಲ್, ನಿತಿನ್ ಬಂಗೇರ, ಬಜ್ಪೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಾಹುಲ್ ಹಮೀದ್, ವಿಮಾನ ನಿಲ್ದಾಣ ನಿರ್ವಸಿತರ ಸಮಿತಿಯ ಸಂಚಾಲಕ ಮಂಜಪ್ಪ ಪುತ್ರನ್, ಜೋಕಟ್ಟೆ ಪಂಚಾಯತ್ ಮಾಜಿ ಸದಸ್ಯ ಅಬೂಬಕ್ಕರ್ ಬಾವ, ನಾಗರಿಕ ಹೋರಾಟ ಸಮಿತಿ ಬಜ್ಪೆಯ ಸಾಲಿ ಮರವೂರು, ಅಶ್ರಫ್ ಎಮ್ ಕೆ ಮತ್ತಿತರರು ಉಪಸ್ಥಿತರಿದ್ದರು.