ಸುಳ್ಯ, ಡಿ. 23(DaijiworldNews/SM): ತೊಡಿಕಾನದಿಂದ ಚಿಟ್ಟನ್ನೂರು ಮಾರ್ಗವಾಗಿ ಬಾಳೆಕಜೆ, ಹರ್ಲಡ್ಕಕ್ಕೆ ಹೋಗುವ ರಸ್ತೆಯ ಕಾಂಕ್ರಿಟೀಕರಣ ಉದ್ಯೋಗ ಖಾತರಿ ಯೋಜನೆಯಡಿ ಆಗಿದ್ದು ಕೆಲಸ ಮಾಡಿದ ಸ್ಥಳೀಯರಿಗೆ ಪೂರ್ತಿ ಹಣ ನೀಡದಿರುವುದರಿಂದ ಈ ರಸ್ತೆ ಫಲಾನುಭವಿ 16 ಮನೆಯವರು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮತದಾನ ಬಹಿಷ್ಕಾರದ ನಿರ್ಧಾರಕ್ಕೆ ಮುಂದಾಗಿದ್ದಾರೆ.

ತೊಡಿಕಾನ ಗ್ರಾಮದ ಬಾಳೆಕಜೆ - ಹರ್ಲಡ್ಕ ರಸ್ತೆಯ ಕಾಂಕ್ರೀಟ್ ಕಾಮಗಾರಿಯನ್ನು ಅರಂತೋಡು ಪಂಚಾಯತ್ ವತಿಯಿಂದ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ 2019ರ ಜನವರಿ ತಿಂಗಳಲ್ಲಿ ಮಂಜೂರುಗೊಂಡಿತ್ತು. 2.98 ಲಕ್ಷ ವೆಚ್ಚದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಿಯಾಯೋಜನೆ ಮಾಡಲಾಗಿತ್ತು. ಇದಕ್ಕಾಗಿ ಈ ರಸ್ತೆಯ ಸುಮಾರು 16 ಮನೆಯವರು ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಿದ್ದರು. ಸ್ಥಳೀಯರು ಹಿರಿಯರಾದ ಬಾಳೆಕಜೆ ಶೇಷಪ್ಪ ಗೌಡರ ನೇತೃತ್ವದಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ಹಣ ಬರುವ ನಿರೀಕ್ಷೆಯಲ್ಲಿ ಆರಂಭದಲ್ಲಿ ಕೈಯಿಂದಲೇ ಹಣ ಹಾಕಿ ಕೆಲಸ ಪೂರ್ಣಗೊಳಿಸಿದ್ದರು. ಆದರೆ ಕೆಲಸ ಪೂರ್ಣಗೊಂಡು 2 ವರ್ಷಗಳಾಗುತ್ತಾ ಬಂದರೂ ಪೂರ್ತಿ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗದಿದ್ದರಿಂದ ಎಲ್ಲಾ 16 ಮನೆಯವರು ಚುನಾವಣೆ ಬಹಿಷ್ಕಾರದ ನಿರ್ಧಾರ ಮಾಡಿದ್ದಾರೆ.
ಕಾಮಗಾರಿಯಲ್ಲಿ ಸಾಮಾಗ್ರಿ ಹಾಗೂ ಇತರ ವೆಚ್ಚ ಸೇರಿ 1,81,600 ರೂಪಾಯಿ ಹಾಗೂ 43280 ರೂಪಾಯಿ ಉದ್ಯೋಗ ಖಾತರಿ ಕೂಲಿ ಜಮೆಯಾಗಿದ್ದು ಒಟ್ಟು 2,24,880 ಅನುದಾನ ಬಿಡುಗಡೆಯಾಗಿದೆ. ಸುಮಾರು 73ಸಾವಿರ ರೂಪಾಯಿ ಬರಲು ಬಾಕಿಯಿದೆ. ಇದರಲ್ಲಿ 45 ಸಾವಿರ ರೂಪಾಯಿ ಗುತ್ತಿಗೆದಾರರಿಗೆ ಜಮೆಯಾಗಿರುತ್ತದೆ. ಕೆಲಸ ಮಾಡಿದ ಉದ್ಯೋಗ ಖಾತರಿ ಫಲಾನುಭವಿಗಳಿಗೆ 28 ಸಾವಿರ ರೂಪಾಯಿ ಬರಬೇಕಾಗಿದೆ. 2 ವರ್ಷಗಳಿಂದ ಈ ಹಣಕ್ಕಾಗಿ ಪಂಚಾಯತ್ ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ವಿವಿಧ ಕಾರಣ ನೀಡಿ ಸತಾಯಿಸುತ್ತಿದ್ದಾರೆ. ಪಂಚಾಯತ್ ಚುನಾವಣೆಯ ಮೊದಲು ಫಲಾನುಭವಿಗಳಿಗೆ 28ಸಾವಿರ ರೂಪಾಯಿ ಪಾವತಿ ಮಾಡದಿದ್ದರೆ ಮತದಾನ ಬಹಿಷ್ಕಾರದ ನಿರ್ಧಾರಕ್ಕೆ ನಾವು 16 ಮನೆಯವರು ಬಂದಿದ್ದೇವೆ " ಎಂದು ಕಾಮಗಾರಿಯ ನೇತೃತ್ವ ವಹಿಸಿದ್ದ ಬಾಳೆಕಜೆ ಶೇಷಪ್ಪ ಗೌಡರು ತಿಳಿಸಿದ್ದಾರೆ.