ಉಳ್ಳಾಲ, ಡಿ.24 (DaijiworldNews/HR): ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಮತಗಟ್ಟೆಯ ಬಳಿ ಕಾಂಗ್ರೆಸ್ ಹಾಗೂ ಎಸ್ಡಿಪಿಐ ಕಾರ್ಯಕರ್ತರ ನಡುವೆ ಮಂಗಳವಾರ ನಡೆದ ಹೊಯ್ ಕೈ ಪ್ರಕರಣದಲ್ಲಿ ನೈಜ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಆಗ್ರಹಿಸಿದ್ದಾರೆ.

ತೊಕ್ಕೊಟ್ಟಿನಲ್ಲಿರುವ ಪಕ್ಷದ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್ ಬೆಂಬಲಿತ ಕಾರ್ಯಕರ್ತ ಝಕಾರಿಯಾ ಮಲಾರ್ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಬಿಜೆಪಿ ಸಹಕಾರ ಕೊಟ್ಟಿರುವ ಸಂಶಯ ಇದ್ದು ಉಳ್ಳಾಲ ಭಾಗದಲ್ಲಿ ಬಿಜೆಪಿ ತನ್ನ ಅಸ್ತಿತ್ವ ಇಲ್ಲದ ಭಾಗದಲ್ಲಿ ಎಸ್ ಡಿಪಿಐ ಅಭ್ಯರ್ಥಿಗಳಿಗೆ ಬೆಂಬಲ ನೀಡಿರುವುದು ಗಮನಕ್ಕೆ ಬಂದಿದೆ" ಎಂದು ಆರೋಪಿಸಿದರು.
"ಬಿಜೆಪಿಯವರು ವಿಧಾನ ಸಭೆ, ಲೋಕಸಭೆ ಚುನಾವಣೆಯಲ್ಲಿ ಒಂದು ರೀತಿ ವರ್ತಿಸಿದರೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅವರಿಗೆ ಎಸ್ ಡಿಪಿಐಯ ಜೊತೆಗೆ ಹೊಂದಾಣಿಕೆಗೆ ಹಿಂಜರಿಯುವುದಿಲ್ಲ. ಮುಸ್ಲಿಂರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಎಸ್ ಡಿಪಿಐ ಇವರಿಗೆ ಆಗ್ತದೆ ಎಂಬುದೇ ದುರಂತ? ಪ್ರಸ್ತುತ ವಿದ್ಯಮಾನಗಳನ್ನು ನೋಡುವಾಗ ಎಸ್ ಡಿಪಿಐ ಬಿಜೆಪಿಯ ಅಂಗ ಪಕ್ಷ ಎಂದು ಅನಿಸ್ತಿದೆ. ಮತಗಟ್ಟೆಯ ಬಳಿ ನಡೆದ ಹಲ್ಲೆಯಲ್ಲಿ ಬಿಜೆಪಿ ಕುಮ್ಮಕ್ಕು ಸ್ಪಷ್ಟವಾಗಿ ಕಾಣುತ್ತಿದೆ" ಎಂದರು.
ಇನ್ನು "ಬಿಜೆಪಿ ಅವಕಾಶವಾದಿ ರಾಜಕೀಯ ಮಾಡುತ್ತಿದೆ. ಕೊಣಾಜೆ ಗ್ರಾಮದ ಅಡ್ಕರೆಪಡ್ಪು ಪ್ರದೇಶದಲ್ಲಿ 150ಬಿಜೆಪಿ ಮತಗಳಿದ್ದರೂ ಅಲ್ಲಿ ತನ್ನಪಕ್ಷದ ಬೆಂಬಲಿತ ಅಭ್ಯರ್ಥಿಯನ್ನು ನಿಲ್ಲಿಸದೆ ಎಸ್ಡಿಪಿಐಗೆ ಸಹಕರಿಸಿದ್ದಾರೆ. ಅಂತಹ ಉದಾಹರಣೆ 10ಗ್ರಾಮದಲ್ಲೂ ಕಂಡುಬಂದಿದೆ. ಹಾಗೆಯೇ ಅಪರಾಧಿಗಳನ್ನು ಬಂಧಿಸಬೇಕು ಎಂದು ಶಾಸಕರ ನೇತೃತ್ವದಲ್ಲಿ ಠಾಣೆಗೆ ಮುತ್ತಿಗೆ ಹಾಕುವ ಮೂಲಕ ಕಾರ್ಯಕರ್ತರ ಜೊತೆಗೆ ಶಾಸಕರು ಸದಾ ಇದ್ದಾರೆ ಎಂದು ತೋರಿಸಿದ್ದೇವೆ" ಎಂದು ಹೇಳಿದ್ದಾರೆ.
ಪುರಸಭೆಯ ಮಾಜಿ ಉಪಾಧ್ಯಕ್ಷ ದಿನೇಶ್ ರೈ ಉಳ್ಳಾಲಗುತ್ತು ಮಾತನಾಡಿ ಎಸ್ ಡಿಪಿಐ ಹಾಗೂ ಬಿಜೆಪಿ ಉಳ್ಳಾಲ ನಗರಸಭೆಯ ಚುನಾವಣೆ ಸಂದರ್ಭ ಹಾಗೂ ಅಧಿಕಾರ ಪಡೆಯುವ ಯತ್ನದಲ್ಲಿ ಹಲವು ರೀತಿಯ ಹೊಂದಾಣಿಕೆ ಮಾಡಿದ್ದು ಜನರು ಮರೆತಿಲ್ಲ ಎಂದರು. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕೋಡಿಜಾಲ್, ಆಲ್ವಿನ್ ಡಿಸೋಜ, ದೇವಕಿ ರಾಘವ ಉಳ್ಳಾಲ್ ಹಾಗೂ ವಿಶ್ವನಾಥ ಪೂಜಾರಿ ಉಪಸ್ಥಿತರಿದ್ದರು.