ಸುಬ್ರಮಣ್ಯ, ಜೂ 20: ನಾಗಾರಾಧನೆಯ ಪ್ರಸಿದ್ದ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಬುಧವಾರ ಭೇಟಿ ನೀಡಿದರು. ಮುಂಜಾನೆ ಶ್ರೀ ದೇವಳಕ್ಕೆ ಭೇಟಿ ನೀಡಿ ಅವರು ಸಂಕಲ್ಪ ನೆರವೇರಿಸಿದರು. ಬಳಿಕ ದೇವರ ಮುಂಭಾಗದಲ್ಲಿ ಅಕ್ಕಿ, ಬೆಲ್ಲ,ಎಳನೀರಿನಲ್ಲಿ ತುಲಾಭಾರ ಸೇವೆ ನೆರವೇರಿಸಿದರು. ನಂತರ ಮಹಾಭಿಷೇಕ ಹಾಗೂ ಮಹಾಪೂಜೆ ಸೇವೆ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಅವರು ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳು ನನ್ನದು ಒಂದು ವರ್ಷದ ಆಡಳಿತ ಎಂದು ಹೇಳಿದ್ದಾರೆ. ಹಾಗಾಗಿ ಅವರ ಅಪೇಕ್ಷೆಗೆ ತಕ್ಕುದಾಗಿ ಈ ಸರಕಾರ ಒಂದು ವರ್ಷದ ಕಾಲ ಇರುತ್ತದೋ ಇರುವುದಿಲ್ಲವೋ ಎಂಬುದು ಯಕ್ಷಪ್ರಶ್ನೆಯಾಗಿದೆ. ದೇಶವು ಕಾಂಗ್ರೆಸ್ ಮುಕ್ತವಾಗಬೇಕು ಎಂಬ ಕನಸನ್ನು ಪ್ರಧಾನಮಂತ್ರಿ ಮೋದಿಯವರು ಕನಸು ಕಂಡಿದ್ದರೋ, ಕರ್ನಾಟಕ ರಾಜ್ಯದಲ್ಲಿ ಕಾಂಗ್ರಸ್ಸಿಗರೇ ಕಾಂಗ್ರೆಸ್ಸನ್ನು ಮುಕ್ತ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನೇ ಮಾರುತ್ತಿದ್ದಾರೆ ಎಂದು ಕಾಂಗ್ರೆಸ್ನ ಎಂಎಲ್ಸಿ ಲಿಂಗಪ್ಪ ಅವರು ನೇರವಾಗಿ ಹೇಳಿರುವುದು ಇದಕ್ಕೆ ಉದಾಹರಣೆಯಾಗಿದೆ.
ಕಾಂಗ್ರೆಸ್ನಲ್ಲಿ ಗುಂಪುಗಾರಿಕೆ ಇದೆ.ಹಿಂದೆಂದೂ ಕಂಡರಿಯದ ರೀತಿಯಲ್ಲಿ ಕಾಂಗ್ರೆಸ್ ಪಕ್ಷದವರು ಬಹಿರಂಗವಾಗಿ ಕಿತ್ತಾಡುತ್ತಿರುವುದರಿಂದ ರಾಜ್ಯದಲ್ಲಿ ಸರಕಾರ ಅಸ್ತಿತ್ವದಲ್ಲಿ ಇದೆಯೋ ಇಲ್ಲವೋ ಎಂಬ ಅನುಮಾನ ರಾಜ್ಯದ ಜನತೆಗೆ ಇದೆ. ರಾಜ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರಕಾರ ಎಂದರೂ ಇದು ಅತೃಪ್ತ ಸರಕಾರ. ಇಂತಹ ಅತೃಪ್ತ ಸರಕಾರ ರಾಜ್ಯದಲ್ಲಿ ಬಹಳ ದಿನ ನಡೆಯಲ್ಲ.ಆದಷ್ಟು ಬೇಗ ಜನರ ಮನಸಿಗೆ ಒಪ್ಪುವಂತಹ ಬಿಜೆಪಿ ಸರಕಾರ ರಾಜ್ಯಕ್ಕೆ ಬರಲಿದೆ ರಾಜ್ಯದಲ್ಲಿರುವ ಸಮ್ಮಿಶ್ರ ಸರಕಾರದ ಪಾಲುದಾರರಾದ ಕಾಂಗ್ರೆಸ್ನಲ್ಲಿ ಈಗಾಗಲೇ ಸಚಿವ ಸ್ಥಾನಕ್ಕಾಗಿ ಲಾಬಿ ಮತ್ತು ಸಚಿವ ಸ್ಥಾನಕ್ಕಾಗಿ ನಡೆದ ಒಳಜಗಳ ಬೀದಿಗೆ ಬಂದಿದೆ.
ಇಡೀ ದೇಶ ಅಪೇಕ್ಷೆ ಪಡುವಂತೆ 2019ರ ಲೋಕಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತ ಪಡೆದು ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಮಂತ್ರಿಯಾಗಿ ದೇಶ ಮತ್ತು ರಾಜ್ಯದ ಅಭಿವೃದ್ಧಿಯಾಗಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ 1ಲಕ್ಷ 4 ಸಾವಿರಕ್ಕೂ ಅಧಿಕ ಮತಪಡೆದು 46ಸಾವಿರಕ್ಕೂ ಅಧಿಕ ಹೆಚ್ಚಿನ ಲೀಡ್ನೊಂದಿಗೆ ಜಯಗಳಿಸಿರುವುದು ಸಂತಸ ತಂದಿದೆ. ಜನತೆಯ ಆಶೀರ್ವಾದ ಇದೇ ರೀತಿ ನನ್ನ ಮೇಲಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ. ಅಲ್ಲದೆ ಶಿವಮೊಗ್ಗ ಸೇರಿದಂತೆ ರಾಜ್ಯದ ಜನತೆಯ ಹಿತಕ್ಕಾಗಿ ಉತ್ತಮ ಕಾರ್ಯಗಳನ್ನು ನೆರವೇರಿಸಲು ದೇವರು ಆಶೀರ್ವದಿಸಲಿ ಎಂದು ಕೇಳಿಕೊಂಡಿದ್ದೇನೆ ಎಂದು ಹೇಳಿದರು.