ಮಂಗಳೂರು, ಜೂ 21: ಕರಾವಳಿಯಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು ದ. ಕ ಜಿಲ್ಲೆಯಲ್ಲಿ ಎರಡು ಮನೆಗಳು ಹಾನಿಗೀಡಾಗಿವೆ. ಅಲ್ಲದೆ ಇನ್ನೆರಡು ದಿನ ಭಾರಿ ಮಳೆಯಾಗಲಿದೆ ಎಂದು ಐಎಂಡಿ ಎಚ್ಚರಿಸಿದೆ . ಜೂ 25 ರವೆರೆಗೆ ಬಿರುಸಿನ ಮಳೆಯಾಗಲಿದ್ದು, ಮೀನುಗಾರರು ಹಾಗೂ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕರಾವಳಿಯಲ್ಲಿ ಜೂ.21 ಮತ್ತು ಜೂ 22 ರಂದು 115 ಮೀ.ಮೀ ಗಿಂತ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ.ಜೂ.23 ರಿಂದ ಜೂ 25 ರವರೆಗೆ ಕರಾವಳಿಯಲ್ಲಿ 65 ಮಿ.ಮೀ ಗಿಂತಲೂ ಅಧಿಕ ಮಳೆ ಸುರಿಯಲಿದೆಯೆಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ.
ಗಾಳಿಗೆ ಉರುಳಿಬಿದ್ದ ಮರ- ವ್ಯಕ್ತಿ ಸಾವು
ಮಳೆಯ ಅಬ್ಬರಕ್ಕೆ ಪಾಣೆಮಂಗಳೂರಿನಿಂದ ಮೆಲ್ಕಾರ್ ಕಡೆಗೆ ಸೇರುವ ಜಾಗದಲ್ಲಿ ಉಲ್ಲಾಸ್ ಕ್ರೀಮ್ ಪಾರ್ಲರ್ ಎದುರು ಬೃಹತ್ ಅಶ್ವತ್ಥ ಮರ ಬುಧವಾರ ಜೋಪಡಿಯ ಮೇಲೆ ಉರುಳಿ ಒಬ್ಬ ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ. ಜೋಪಡಿಯಲ್ಲಿ ಹೂಕುಂಡ ಸಹಿತ ಸಿಮೆಂಟ್ ನ ನಾನಾ ಉತ್ಪನ್ನ ನಿರ್ಮಿಸಿ ಜೀವನ ಸಾಗಿಸುತ್ತಿದ್ದ ಉತ್ತರ ಪ್ರದೇಶದ ಉನ್ನವ್ ಜಿಲ್ಲೆಯ ರಾಮ್ ಸೇವಕ್ 36 ಮೃತಪಟ್ಟವರು.
ಮನೆಗಳಿಗೆ ಹಾನಿ
ಮನೆಗಳಿಗೆ ಹಾನಿ ನಗರದ ಜಲ್ಲಿಗುಡ್ಡೆಯ ಜಯನಗರ ಎಂಬಲ್ಲಿ ಚಂದ್ರಶೇಖರ್ ಕೊಟ್ಟಾರಿ ಎಂಬವರ ಮನೆಗೆ ಮರ ಬಿದ್ದು ಮನೆ ತೀವ್ರ ಹಾನಿಯಾಗಿದೆ. ಸುಮಾರು 20 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಬಂಟ್ವಾಳ ತಾಲೂಕಿನ ವಿಶ್ವನಾಥ ಬೆಳ್ಚಡ ಎಂಬವರ ಮನೆ ಮೇಲೆಯೂ ಮರ ಬಿದ್ದು ಹಾನಿಯುಂಟಾಗಿದೆ. ಸುಮಾರು 1.5 ಲಕ್ಷ ರೂ ನಷ್ಟ ಅಂದಾಜಿಸಲಾಗಿದೆ. ಘಟನಾ ಸ್ಥಳಗಳಿಗೆ ಜನಪ್ರತಿನಿಧಿಗಳು ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿದ್ದಾರೆ,.
ನಗರ ಕೊಟ್ಟಾರ ಚೌಕಿ ಮಾಲಾಡಿ, ಮಾಲೆಮಾರ್ , ಅಳಕೆ , ಕುದ್ರೋಳಿ, ಕಂಕನಾಡಿ ಅತ್ತಾವರ ಮುಂತಾದ ಪ್ರದೇಶದಲ್ಲಿ ಮಳೆ ನೀರು ಹರಿದು ಹೋಗಲು ಸ್ಥಳವಿಲ್ಲದೆ ರಸ್ತೆಯಲ್ಲೇ ನೀರು ಹರಿದು ಹೋಗುತ್ತಿತ್ತು. ನಗರದ ಬಹುತೇಕ ಕಡೆಗಳಲ್ಲಿ ತೋಡಿನ ವ್ಯವಸ್ಥೆ ಇಲ್ಲದಿರುವುದು ಮತ್ತು ಅವೈಜ್ಞಾನಿಕವಾಗಿ ತೋಡು ನಿರ್ಮಿಸಿರುವುದು ರಸ್ತೆಯಲ್ಲಿ ನೀರು ಹರಿದು ಹೋಗಲು ಕಾರಣವಾಗಿದೆ