ಮಂಗಳೂರು, ಡಿ.25 (DaijiworldNews/MB) : ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿದ್ದು ಮಾತ್ರವಲ್ಲದೇ, ಮದುವೆ ಪ್ರಸ್ತಾಪ, ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಚಿತ್ರದುರ್ಗದ ಹೊಸದುರ್ಗ ತಾಲೂಕಿನ ಕುರುಬನಹಳ್ಳಿ ನಿವಾಸಿ ಪರಮೇಶ್ವರಪ್ಪ ರಂಗಪ್ಪ (23) ಎಂದು ಗುರುತಿಸಲಾಗಿದೆ.
ಡಿಸೆಂಬರ್ 2 ರಂದು ಅಂಚೆ ಇಲಾಖೆಯ ಹಿರಿಯ ಅಧಿಕಾರಿ ಹರ್ಷ ಎನ್ ಅವರು ಪರಮೇಶ್ವರಪ್ಪ ಎಂಬ ವ್ಯಕ್ತಿಯ ವಿರುದ್ಧ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಪರಮೇಶ್ವರಪ್ಪ ತನ್ನ ನಕಲಿ ಫೇಸ್ಬುಕ್ ಖಾತೆಯಲ್ಲಿ ತಾನು ಮಂಗಳೂರಿನ ಹಿರಿಯ ಅಂಚೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಸುಳ್ಳು ಹೇಳಿಕೊಂಡಿದ್ದು ಗೋವಾ ನಿವಾಸಿ ಹನುಮಪ್ಪ ಬಿಸಳ್ಳಿ ಎಂಬ ವ್ಯಕ್ತಿಯ ಮಗಳೊಂದಿಗೆ ವಿವಾಹ ಪ್ರಸ್ತಾಪ ಮಾಡಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪರಮೇಶ್ವರಪ್ಪ ತನಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು ಮೇಘದೂತ ಪ್ರಶಸ್ತಿ ದೊರಕಿದೆ ಎಂದು ವ್ಯಾಟ್ಸ್ಆಪ್ ಮೂಲಕ ಹನುಮಪ್ಪ ಅವರ ಮಗಳಿಗೆ ಫೋಟೋಗಳನ್ನು ಕಳುಹಿಸಿದ್ದ. ಈ ಹಿನ್ನೆಲೆ ಹನುಮಪ್ಪ ಅವರು ಪರಮೇಶ್ವರಪ್ಪನ ಹಿನ್ನೆಲೆಯ ಬಗ್ಗೆ ತಿಳಿದುಕೊಳ್ಳಲು ಮುಂದಾಗಿದ್ದು ಪರಮೇಶ್ವರಪ್ಪ ವಂಚಕ ಎಂದು ತಿಳಿದುಬಂದಿದೆ.
ಡಿಸೆಂಬರ್ 20 ರಂದು ಆರೋಪಿಯು ಮಂಗಳೂರು ನಗರದ ಸಶಸ್ತ್ರ ಮೀಸಲು ಪಡೆಯ ಇಬ್ಬರು ಸಿಬ್ಬಂದಿಗೆ ಅಂಚೆ ಇಲಾಖೆಯಲ್ಲಿನ ಗ್ರೇಡ್ 1 ಮತ್ತು ಗ್ರೇಡ್ 2 ಹುದ್ದೆ ಖಾಲಿ ಇರುವುದಾಗಿ ನಂಬಿಸಿ 6 ಲಕ್ಷ ರೂ. ನಗದು ಪಡೆದು ವಂಚಿಸಿದ್ದ. ಪೊಲೀಸ್ ಸಿಬ್ಬಂದಿಗಳನ್ನು ವಂಚಿಸಲು ಪರಮೇಶ್ವರಪ್ಪ ಅಂಚೆ ಇಲಾಖೆಯ ಹಿರಿಯ ಅಧಿಕಾರಿಯಾಗಿರುವ ಪೂಜಾ ಸಿ ಎನ್ ಎಂಬ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದನು.
ಈ ಪ್ರಕರಣದ ತನಿಖೆಯ ವೇಳೆ ಎರಡೂ ಪ್ರಕರಣಗಳು ಸಂಬಂಧ ಹೊಂದಿವೆ ಎಂದು ತಿಳಿದುಬಂದಿದೆ. ಪೊಲೀಸ್ ಕಮಿಷನರ್ ವಿಕಾಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ತನಿಖಾ ಅಧಿಕಾರಿ ಡಿಸಿಪಿ ಹರಿರಾಮ್ ಶಂಕರ್ ಅವರ ಮೇಲ್ವಿಚಾರಣೆಯಲ್ಲಿ, ಸೈಬರ್ ಅಪರಾಧ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್, ತನಿಖಾ ಅಧಿಕಾರಿ ಬಿ.ಸಿ.ಗಿರೀಶ್ ಕಾರ್ಯ ನಿರ್ವಹಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ತನಿಖಾ ಅಧಿಕಾರಿ ಬಿ.ಸಿ.ಗಿರೀಶ್ ಅವರು ಡಿಸೆಂಬರ್ 22 ರಂದು ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಆರೋಪಿಯನ್ನು ಬಂಧಿಸಿ ಡಿಸೆಂಬರ್ 23 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಪರಮೇಶ್ವರಪ್ಪನ ಕೊರೊನಾ ಪರೀಕ್ಷಾ ವರದಿ ಬಾಕಿ ಇರುವುದರಿಂದ ಆತನನ್ನು ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ.
ವಿಚಾರಣೆ ನಡೆಸಿ ಪರಮೇಶ್ವರಪ್ಪ ವಿವಿಧ ಹೆಸರಿನಲ್ಲಿ 20 ನಕಲಿ ಫೇಸ್ಬುಕ್ ಖಾತೆಗಳನ್ನು ರಚಿಸಿರುವುದು ಬಹಿರಂಗವಾಗಿದೆ. ಜನರ ನಂಬಿಕೆ ಗಳಿಸಲು ಮತ್ತು ಅವರನ್ನು ಮೋಸಗೊಳಿಸಲು ತಾನು ವಿವಿಧ ಇಲಾಖೆಗಳ ಅಧಿಕಾರಿಯಾಗಿ ನಟಿಸಿದ್ದೇನೆ ಎಂದು ಆತ ಒಪ್ಪಿಕೊಂಡಿದ್ದಾನೆ. ಜನರಿಗೆ ಉದ್ಯೋಗದ ಭರವಸೆ ನೀಡಿ 13 ಕ್ಕೂ ಹೆಚ್ಚು ಜನರಿಗೆ 15-20 ಲಕ್ಷ ರೂ.ಗೆ ವಂಚಿಸಿರುವುದು ಕೂಡಾ ಬಹಿರಂಗವಾಗಿದೆ.
ನಗರ ಸೈಬರ್ ಅಪರಾಧ ಘಟಕವು ಆರೋಪಿಯಿಂದ ಒಂದು ಲ್ಯಾಪ್ಟಾಪ್, ಐದು ಮೊಬೈಲ್ ಫೋನ್, ಅಂಚೆ ಇಲಾಖೆಯ ನಕಲಿ ಐಡಿ, ಐಸಿಐಸಿಐ ಬ್ಯಾಂಕ್ ಡೆಬಿಟ್ ಕಾರ್ಡ್ ವಶಪಡಿಸಿಕೊಂಡಿದೆ. ವಶಪಡಿಸಿಕೊಂಡ ವಸ್ತುಗಳ ಮೌಲ್ಯ ಸುಮಾರು 1.35 ಲಕ್ಷ ರೂಪಾಯಿಯಾಗಿದೆ. ಪ್ರಸ್ತುತ ತನಿಖೆ ಪ್ರಗತಿಯಲ್ಲಿದೆ.