ಬೆಂಗಳೂರು,ಜೂ 21: ಸಾರಿಗೆ ಸಂಸ್ಥೆಗಳು ಸುಮಾರು 500 ಕೋಟಿ ರೂ. ನಷ್ಟದಲ್ಲಿದ್ದು, ಶೇ. 15 ರಷ್ಟು ಪ್ರಯಾಣ ದರ ಏರಿಸಬೇಕು ಎಂದು ನಿಗಮಗಳು ಪ್ರಸ್ತಾವ ಸಲ್ಲಿಸಿವೆ. ಆದರೆ ಹೊಸ ಸರ್ಕಾರ ಈಗ ತಾನೇ ಅಧಿಕಾರಕ್ಕೆ ಬಂದಿರುವುದರಿಂದ ಸದ್ಯ ಪ್ರಯಾಣ ದರ ಏರಿಕೆ ಬೇಡ ಎಂದು ತೀರ್ಮಾನಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಅವರು ಬುಧವಾರ ಸ್ಪ,ಷ್ಟಪಡಿಸಿದ್ದಾರೆ.
ಡೀಸೆಲ್ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್ ಪ್ರಯಾಣ ದರವನ್ನು ಶೇ. 15 ರಷ್ಟು ಏರಿಕೆ ಮಾಡುವಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ ಸದ್ಯಕ್ಕೆ ದರ ಏರಿಕೆ ಮಾಡುವುದಿಲ್ಲ ಎಂದರು.ಇದರಿಂದ 500 ಕೋಟಿ ನಷ್ಟ ಉಂಟಾಗಲಿದೆ ಎಂದು ಸಚಿವರು ವಿವರಿಸಿದರು.
ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ನಷ್ಟ ಕಡಿಮೆ ಮಾಡಲು ಮತ್ತು ಬಸ್ ನಿಲ್ದಾಣಗಳನ್ನು ವಾಣಿಜ್ಯೀಕರಿಸುವ ಉದ್ದೇಶವಿದೆ. ಇದರಿಂದ 100 ರಿಂದ 200 ಕೋಟಿಯಷ್ಟು ಆದಾಯ ಸಂಸ್ಥೆಗೆ ಬರುತ್ತದೆ. ಈ ಕುರಿತು ಅಧಿಕಾರಿಗಳ ಜೊತೆಗೂ ಮಾತುಕತೆ ನಡೆಸಲಾಗಿದೆ ಎಂದು ತಮ್ಮಣ್ಣ ತಿಳಿಸಿದರು.
ಡೀಸೆಲ್ ದರ ಹೆಚ್ಚಳ್ಳವಾಗುತ್ತಿರುವ ಹಿನ್ನೆಲೆಯಲ್ಲಿ ನಿಗಮವು ನಿತ್ಯ ಕೋಟ್ಯಾಂತರ ರುಪಾಯಿಗಳ ನಷ್ಟ ಅನುಭವಿಸುತ್ತಿದೆ. ಹೀಗಾಗಿ ಬಸ್ ಪ್ರಯಾಣ ದರ ಏರಿಸಬೇಕು ಎಂದು ತೀರ್ಮಾನಿಸಲಾಗಿತ್ತು, ಆದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬಾರದೇ ಇರಲು ಸಚಿವರು ಟಿಕೆಟ್ ದರ ಏರಿಸಲು ನಿರಾಕರಿಸಿದ್ದಾರೆ.