ಮಂಗಳೂರು, ಡಿ.25 (DaijiworldNews/MB) : ಕ್ರಿಸ್ಮಸ್ ಸಂಭ್ರಮದಲ್ಲಿ ಸಂದರ್ಭ ಸಾಕಷ್ಟು ಅಲಂಕಾರಗಳನ್ನು ನಾವು ಕಾಣಬಹುದಾಗಿದೆ. ಜನರು ಈ ಹಬ್ಬದ ಸಂದರ್ಭದ ವೇಳೆ ಕ್ರಿಸ್ಮಸ್ ಟ್ರೀ, ನಕ್ಷತ್ರ, ಕ್ರಿಬ್ಗಳ ಮೂಲಕ ಮನೆಯನ್ನು ಅಲಂಕರಿಸಿಕೊಂಡು ಸಂತೋಷ ಮತ್ತು ಭರವಸೆಯೊಂದಿಗೆ ಈ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬಕ್ಕೆ ಗೋದಾಲಿ, ಕ್ರಿಸ್ಮಸ್ ಟ್ರೀ, ಕುಸ್ತಾರ್, ನಕ್ಷತ್ರಗಳೇ ಪ್ರಮುಖ ಆಕರ್ಷಣೆಯಾಗಿದೆ.








ಮಂಗಳೂರು ಪ್ರಾಂತ್ಯದ ಐಸಿವೈಎಂ ಯುವಕರು ಪ್ರಾಂತ್ಯದ ಐಸಿವೈಎಂ ಅಧ್ಯಕ್ಷ ಲಿಯಾನ್ ಲಾಯ್ಡ್ ಸಲ್ಡಾನ್ಹಾರ ನೇತೃತ್ವದಲ್ಲಿ ಐಸಿವೈಎಂ ಸೆಂಟ್ರಲ್ ಕೌನ್ಸಿಲ್ ಸದಸ್ಯ, ಐಸಿವೈಎಂ ಬೆಂದೂರುವೆಲ್ ಘಟಕ ಸದಸ್ಯರು ಐಸಿವೈಎಂ ನಿರ್ದೇಶಕ ಫಾ. ಅಶ್ವಿನ್ ಕಾರ್ಡೋಜಾ ಮತ್ತು ರಾಯನ್ ವಾಸ್ ಅವರ ಮಾರ್ಗದರ್ಶನದೊಂದಿಗೆ 20 ಅಡಿಯ ಬೃಹತ್ ನಕ್ಷತ್ರ ರಚಿಸಿದ್ದಾರೆ.
ಈ ಬೃಹತ್ ನಕ್ಷತ್ರವನ್ನು ಜೆಪ್ಪು-ನಂದಿಗುಡ್ಡದ ಕಡೆಗೆ ಸಾಗುವ ರಸ್ತೆಯಲ್ಲಿ ಇರಿಸಲಾಗಿದ್ದು ಮಂಗಳೂರಿನ ಯುವಕರೇ ಈ ನಕ್ಷತ್ರವನ್ನು ನಿರ್ಮಿಸಿದ್ದಾರೆ.
ಯೇಸು ಕ್ರಿಸ್ತ ಜನಿಸಿದ ಬಳಿಕ ಪೂರ್ವದಿಂದ ಜೆರುಸಲೆಮ್ಗೆ ಮಾಗಿಯವರು ಬರಲು ಕ್ರಿಸ್ಮಸ್ನ ನಕ್ಷತ್ರವು ಸಹಾಯ ಮಾಡಿದೆ. ಈ ಹಿನ್ನೆಲೆ ಈ ನಕ್ಷತ್ರವು ಯಾವಾಗಲೂ ಭಗವಂತನನ್ನು ಹುಡುಕಲು ಪ್ರೇರೇಪಿಸಲಿ, ಭಗವಂತ ಎಲ್ಲಾ ಯುವಜನರಿಗೆ ಉತ್ತಮ ಭವಿಷ್ಯದತ್ತ ದಾರಿ ತೋರಿಸಲಿ ಎಂಬ ನಿಟ್ಟಿನಲ್ಲಿ ಯೇಸು ಕ್ರಿಸ್ತ ಜನಿಸಿದ ಈ ಕ್ರಿಸ್ಮಸ್ ಸಂಭ್ರಮದಂದು ನಕ್ಷತ್ರಗಳ ಮೂಲಕ ಅಲಂಕಾರ ಮಾಡಲಾಗುತ್ತದೆ.
ಮಂಗಳೂರು ಪ್ರಾಂತ್ಯದ ಎಲ್ಲಾ ಯುವಕರಿಗೆ ಸೆಂಟ್ರಲ್ ಕೌನ್ಸಿಲ್ ಕ್ರಿಸ್ಮಸ್ ಶುಭಾಶಯಗಳನ್ನು ಕೋರಿದೆ.