ಮಂಗಳೂರು,ಜೂ 21: ಬಂಟ್ವಾಳದ ಬಡ್ಡಕಟ್ಟೆಯಲ್ಲಿ, ಜೂ 11 ರಂದು ಹಾಡುಹಗಲೇ ತಲ್ವಾರ್ ಝಳಪಿಸುತ್ತಾ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಸ್ಟಲ್ ವುಡ್ ನಟ ಸುರೇಂದ್ರ ಶೆಟ್ಟಿ ಬಂಟ್ವಾಳ್ ಸಹಿತ ಆತನ ಸಹಚರರನ್ನು ಕಾಸರಗೋಡಿನ ಕುಂಬಳೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಿಜೆಪಿಯ ನಾಲ್ವರು ಕಾರ್ಯಕರ್ತರ ಮೇಲೆ ಹಾಡುಹಗಲೆ ಹಲ್ಲೆ ನಡೆಸಿದ ಹಾಗೂ ಬೆದರಿಸಿದ ಕುರಿತಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಕುಂಬಳೆಯಲ್ಲಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಮಂಗಳೂರು ಪೊಲೀಸರ ವಿಶೇಷ ತಂಡ ಆರೋಪಿಗಳಾದ ಸುರೇಂದ್ರ ಬಂಟ್ವಾಳ್ ಹಾಗೂ ಸತೀಶ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಮಂಗಳೂರಿಗೆ ಕರೆ ತಂದಿದ್ದಾರೆ. ಇಂದು ಸಂಜೆ ವೇಳೆಗೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಜೂ 11 ಸೋಮವಾರ ಮಧ್ಯಾಹ್ನ ಬಡ್ಡಕಟ್ಟಿಯಲ್ಲಿರುವ ಹೊಟೇಲೊಂದಕ್ಕೆ ಊಟಕ್ಕೆಂದು ತೆರಳಿದ್ದ ಬಿಜೆಪಿ ಕಾರ್ಯಕರ್ತರಾದ ಗಣೇಶ್ ರೈ ಮಾಣಿ ಹಾಗೂ ಪುಪ್ಷರಾಜ್ ಎಂಬವರಿಗೆ ಸುರೇಂದ್ರ ಬಂಟ್ವಾಳ ಮತ್ತಿತರರು ಹಲ್ಲೆಗೈದು, ಕೊಲೆಗೆ ಯತ್ನಿಸಿದ್ದರು ಎಂದು ದೂರಲಾಗಿತ್ತು. ಸುರೇಂದ್ರ ಬಂಟ್ವಾಳ ನಡುರಸ್ತೆಯಲ್ಲಿ ತಲವಾರು ಝಳಪಿಸಿ ಅವಾಚ್ಯ ಶಬ್ದಗಳಿಮದ ನಿಂದಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಜೂ 10 ರ ರವಿವಾರ ರಾತ್ರಿ ಬಂಟ್ವಾಳ ಬೈಪಾಸ್ನಲ್ಲಿರುವ ಸೆಲೂನ್ಗೆ ನುಗ್ಗಿ ದೀಕ್ಷಿತ್ ಎಂಬವರಿಗೆ ಭುವಿತ್ ಮತ್ತಿತರರು ಹಲ್ಲೆಗೈದಿದ್ದರು ಎನ್ನಲಾಗಿದ್ದು, ಇದಕ್ಕೆ ಪ್ರತಿಯಾಗಿ ಮರದಿನ ಬಿಜೆಪಿ ಕಾರ್ಯಕರ್ತರ ಕೊಲೆಯತ್ನ ನಡೆದಿತ್ತು ಎಂದು ದೂರಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಂಜಿಕಲ್ಲಿನ ಕಜೆಬೈಲ್ ನಿವಾಸಿ ದೀಪಕ್ (27), ಬಿ.ಸಿ.ರೋಡ್ ಅಗ್ರಬೈಲ್ ನಿವಾಸಿ ಪವನ್ (26), ಬಂಟ್ವಾಳ ನಿವಾಸಿಗಳಾದ ಶೈಲೇಶ್ (26), ರಂಜೀತ್ (25) ನನ್ನು ಈಗಾಗಲೇ ಬಂಧಿಸಲಾಗಿದ್ದು, ಉಳಿದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಗಳಾದ ಸುರೇಂದ್ರ ಬಂಟ್ವಾಳ, ತಿಲಕ್, ಮನೋಹರ್, ಪ್ರದೀಪ್, ಸತೀಶ ಎಂಬವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.