ಮಂಗಳೂರು, ಡಿ.25 (DaijiworldNews/PY): "ಅಟಲ್ ಬಿಹಾರಿ ವಾಜಪೇಯಿ ಅವರು ತಮ್ಮ ಇಡೀ ಜೀವನವನ್ನು ದೇಶಕ್ಕಾಗಿ ಅರ್ಪಿಸಿ ತ್ಯಾಗ ಮಾಡಿದ ಏಕೈಕ ರಾಜಕಾರಣಿ. ದೇಶವು ಪಕ್ಷದ ವ್ಯಾಪ್ತಿಯನ್ನು ಮೀರಿ ಅವರನ್ನು ಎಲ್ಲರೂ ಕೂಡಾ ಗೌರವಿಸುತ್ತಾರೆ" ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.






ನಗರದ ಪಿವಿಎಸ್ ಬಳಿ ಇರುವ ಟಿವಿ ರಮಣ ಪೈ ಸಭಾಂಗಣದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಪ್ರಯುಕ್ತ ಜಿಲ್ಲಾ ಬಿಜೆಪಿ ವತಿಯಿಂದ ಅಟಲ್ ಜೀ ಸ್ಮರಣೆ ಮತ್ತು ಕಿಸಾನ್ ಸಮ್ಮಾನ್ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಮಾತನಾಡಿದ ಅವರು, "ಕೃಷಿ ಹಾಗೂ ಮೀನುಗಾರಿಕೆಗೆ ವಿಶೇಷ ಒತ್ತು ನೀಡುವ ಮೂಲಕ ಪ್ರಧಾನ ಮಂತ್ರಿಗಳು ವಿವಿಧ ಯೋಜನೆಗಳನ್ನ ಜಾರಿಗೊಳಿಸಿದ್ದಾರೆ. ದಲ್ಲಾಳಿಗಳ ಹಸ್ತಕ್ಷೇಪ ತಪ್ಪಿಸಿ ರೈತರು ನೇರ ಮಾರುಕಟ್ಟೆಯಲ್ಲಿ ಉತ್ಪನ್ನಗಳನ್ನ ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಅಲ್ಲದೇ ರೈತರನ್ನ ಗುರುತಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿಗಳು ಕಿಸಾನ್ ಸಮ್ಮಾನ್ ಯೋಜನೆ ಜಾರಿಗೆ ತಂದಿದ್ದಾರೆ" ಎಂದರು.
"ಅಟಲ್ ಬಿಹಾರ್ ವಾಜಪೇಯಿ ಅವರು ತಮ್ಮ ಆಡಳಿತ ಅವಧಿಯಲ್ಲಿ ಯಾವುದೇ ವಿವಾದ ಅಥವಾ ಕಳಂಕವಿಲ್ಲದೇ ಆಡಳಿತ ನಡೆಸಿದ್ದಾರೆ. ವಾಜಪೇಯಿ ಅವರ ಮಾರ್ಗದರ್ಶನದಲ್ಲಿ ಪೋಖ್ರಾನ್ನಲ್ಲಿ ನಡೆಸಿದ ಪರಮಾಣು ಪರೀಕ್ಷೆಯು ಭಾರತದ ಚಿತ್ರಣವನ್ನು ಜಾಗತಿಕವಾಗಿ ಬದಲಾಯಿಸಿತು. ಅವರಿಗೆ ದೇಶದ ನಾಗರಿಕರ ಮೇಲಿನ ಪ್ರೀತಿಯಿಂದಾಗಿ ಅವರನ್ನು ಇನ್ನೂ ಗೌರವಿಸಲಾಗುತ್ತಿದೆ. ಆದ್ದರಿಂದ, ಅವರ ಜನ್ಮದಿನವನ್ನು ಕಿಸಾನ್ ಸಮ್ಮಾನ್ ದಿನವಾಗಿ ಆಚರಿಸಲಾಗುತ್ತದೆ" ಎಂದು ಹೇಳಿದರು.
"ಹೊಸ ಕೃಷಿ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಯ ವಿವಾದಾತ್ಮಕ ತಿದ್ದುಪಡಿಗಳ ಬಗ್ಗೆ ಮಾತನಾಡಿದ ಅವರು, ರೈತರನ್ನು ಮಧ್ಯವರ್ತಿಗಳ ಬಂಧನದಿಂದ ಮುಕ್ತಗೊಳಿಸಲು ಹಾಗೂ ರೈತರು ತಮ್ಮ ಉತ್ಪನ್ನಗಳನ್ನು ನೇರವಾಗಿ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅನುವು ಮಾಡಿಕೊಡಲು ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ" ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಮಾತನಾಡಿ, "ಅಟಲ್ ಬಿಹಾರಿ ವಾಜಪೇಯಿ ಅವರ ತ್ಯಾಗ, ಸಮರ್ಪಣೆ, ಪ್ರಾಮಾಣಿಕತೆ ಮತ್ತು ದೇಶಭಕ್ತಿಯ ಸಂಕೇತವಾಗಿದೆ. ಅವರು 9 ಬಾರಿ ಲೋಕಸಭಾ ಸದಸ್ಯರಾಗಿ ಮತ್ತು ಎರಡು ಬಾರಿ ರಾಜ್ಯಸಭೆಯ ಸದಸ್ಯರಾಗಿ ಸಂಸತ್ತಿನಲ್ಲಿ ತಮ್ಮ ಇಡೀ ಜೀವನವನ್ನು ಕಳೆದ ವ್ಯಕ್ತಿ. ಯಾವುದೇ ಭ್ರಷ್ಟಾಚಾರ ಅಥವಾ ಯಾವುದೇ ಕಳಂಕವಿಲ್ಲದೆ ಅವರು ದೇಶವನ್ನು ಆಳಿದರು. ಆದ್ದರಿಂದ ಅವರನ್ನು ರಾಜಕೀಯದಲ್ಲಿ ಆದರ್ಶಪ್ರಾಯವಾಗಿ ಕಾಣಲಾಗುತ್ತಿದೆ" ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ ಮತ್ತು ರೈತ ಮುಖಂಡ ಕಡಮಜಲು ಸುಭಾಷ್ ರೈ ಮಾತನಾಡಿದರು.
ಇದೇ ಸಂದರ್ಭ ದೆಹಲಿಯಿಂದ ನೇರ ಪ್ರಸಾರ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾಷಣವನ್ನು ಗಣ್ಯರು ಸೇರಿದಂತೆ ಕಾರ್ಯಕರ್ತರು ವೀಕ್ಷಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್, ವೇದವ್ಯಾಸ ಕಾಮತ್, ಮೇಯರ್ ದಿವಾಕರ ಪಾಂಡೇಶ್ವರ ಮತ್ತಿತ್ತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 500ಕ್ಕೂ ಅಧಿಕ ಕಾರ್ಯಕರ್ತರು ಹಸಿರು ಶಾಲು ಹಾಕಿಕೊಂಡು ಭಾಗವಹಿಸಿದ್ದರು.