ಮಂಗಳೂರು, ,ಡಿ.26 (DaijiworldNews/HR): ಯುಕೆ ಮತ್ತು ಇತರ ದೇಶಗಳಿಂದ ಇತ್ತೀಚೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದವರ ಮೇಲೆ ನಡೆಸಿದ ಕೊರೊನಾ ಪರೀಕ್ಷೆಗಳು ಡಿಸೆಂಬರ್ 25 ಶುಕ್ರವಾರ ಮುಕ್ತಾಯಗೊಂಡಿವೆ. ಈ ಪ್ರಯಾಣಿಕರಲ್ಲಿ ಯಾರೊಬ್ಬರಿಗೂ ಸೋಂಕು ದೃಢಪಟ್ಟಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಬ್ರಿಟನ್ನಲ್ಲಿ ರೂಪಾಂತರ ಕೊರೊನಾ ವೈರಸ್ ಪತ್ತೆಯಾದ ಹಿನ್ನಲೆಯಲ್ಲಿ ಡಿಸೆಂಬರ್ 7 ರ ನಂತರ ಬ್ರಿಟನ್ನಿಂದ ಮಂಗಳೂರಿಗೆ ಬಂದ 66 ಜನರ ಕೊರೊನಾ ಪರೀಕ್ಷೆಯನ್ನು ನಡೆಸಲಾಗಿದೆ. ಅವರಲ್ಲಿ ಮೂವರು ಮತ್ತೆ ಇಂಗ್ಲೆಂಡ್ಗೆ ಹೋಗಿದ್ದರೆ, ಉಳಿದವರು ಮಂಗಳೂರು ಮತ್ತು ಇತರ ಸ್ಥಳಗಳಲ್ಲಿ ತಂಗಿದ್ದರು. ಬುಧವಾರ ಮತ್ತು ಗುರುವಾರ ಎರಡು ಹಂತಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಯಿತು. ಎಲ್ಲಾ ವರದಿಗಳನ್ನು ಶುಕ್ರವಾರದೊಳಗೆ ಸ್ವೀಕರಿಸಲಾಗಿದ್ದು ಅವರೆಲ್ಲರ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಚಂದ್ರ ಬೈರಿ ತಿಳಿಸಿದ್ದಾರೆ.
ಯುಕೆ ಸೇರಿದಂತೆ ವಿವಿಧ ದೇಶಗಳಿಂದ ನವೆಂಬರ್ 28 ರ ನಂತರ 31 ಜನರು ಉಡುಪಿ ಜಿಲ್ಲೆಗೆ ಬಂದಿದ್ದು ಅವರಲ್ಲಿ 28 ಮಂದಿಗೆ ಕೊರೊನಾ ವರದಿ ನೆಗೆಟಿವ್ ಬಂದಿದೆ. ಒಬ್ಬರು ದಕ್ಷಿಣ ಕನ್ನಡದ ಒಬ್ಬ ಮತ್ತು ಇಬ್ಬರು ಬೆಂಗಳೂರಿನವರು ಪರೀಕ್ಷೆಗೆ ಒಳಗಾಗಲಿಲ್ಲ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.