ಬೈಂದೂರು, ಜೂ 21: ತಾಲೂಕಿನ ಶಿರೂರು ಸಮೀಪದ ಗ್ರೀನ್ ವ್ಯಾಲಿಯ ಶಾಲೆಯ ಬಳಿ ರಾಷ್ಟೀಯ ಹೆದ್ದಾರಿ ಪಕ್ಕದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪಡಿತರ ಚೀಟಿಗಳು ಪತ್ತೆಯಾಗಿದೆ. ಚೀಲದಲ್ಲಿ ಪತ್ತೆಯಾಗಿರುವ ಈ ಪಡಿತರ ಚೀಟಿಗಳು ಬಂಟ್ವಾಳ ತಾಲೂಕು ಪಂಚಾಯತ್ಗೆ ವ್ಯಾಪ್ತಿಗೆ ಸೇರಿದ್ದಾಗಿದ್ದು 2003, 2004 ಮತ್ತು 2011 ಇಸವಿಯ ಹಲವಾರು ಪಡಿತರ ಚೀಟಿಗಳಿವೆ. ಅಲ್ಲದೇ ಗ್ರಾಮ ಪಂಚಾಯತ್ ಹಲವಾರು ದಾಖಲೆ ಈ ಚೀಲದಲ್ಲಿದ್ದು ಕಂಡುಬಂದಿದೆ. ಪತ್ತೆಯಾದ ಪಡಿತರ ಚೀಟಿಗಳು ಅವಧಿ ಮುಗಿದ ದಾಖಲೆಗಳು ಎನ್ನಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಡಿತರ ಚೀಟಿಗಳು ಇಲ್ಲಿಗೆ ಹೇಗೆ ಬಂತು ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಮೂಲಗಳ ಪ್ರಕಾರ ಹಳೆಯ ದಾಖಲೆ ಮತ್ತು ಪಡಿತರ ಚೀಟಿಗಳನ್ನು ಕ್ರಮಬದ್ಧವಾಗಿ ವಿಲೇವಾರಿ ಮಾಡಲಾಗುತ್ತದೆ. ಅದೇ ವಾಹನದಲ್ಲಿ ವಿಲೆವಾರಿಗೆ ಕಳುಹಿಸಿದ ಸಂದರ್ಭ ಬಿದ್ದು ಹೋಗಿರಬಹುದು ಎಂದು ಅಂದಾಜಿಸಲಾಗಿದೆ.
ಬೈಂದೂರು ಠಾಣಾ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.