ಮಂಗಳೂರು, ಡಿ.26 (DaijiworldNews/PY): "ಕಾರು ಹಿಂಬಾಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ನಮ್ಮ ಗಮನಕ್ಕೂ ಬರುವ ಮುನ್ನವೇ ಪತ್ತೆ ಹಚ್ಚಿದ್ದಾರೆ. ಆರೋಪಿಯಲ್ಲಿ ದುರುದ್ದೇಶವಿದ್ದರೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದರು" ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.





ಕಾರು ಹಿಂಬಾಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಾತನಾಡಿದ ಅವರು, "ಬೆಂಗಾವಲು ವಾಹನ ಸಿಬ್ಬಂದಿ ಅವರ ಕೆಲಸ ಮಾಡಿದ್ದಾರೆ. ನಮ್ಮ ಗಮನಕ್ಕೆ ಬರುವ ಮುನ್ನವೇ ಪೊಲೀಸ್ ಇಲಾಖೆ ಪತ್ತೆ ಹಚ್ಚಿದ್ದಾರೆ. ಆರೋಪಿಯನ್ನು ರೆಡ್ಹ್ಯಾಂಡ್ ಆಗಿ ಬಂಧಿಸಲು ಮುಂದಾಗಿದ್ದರು. ಆತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಎನ್ನುವುದು ಮುಖ್ಯವಲ್ಲ. ಆತನಲ್ಲಿ ದುರುದ್ದೇಶವಿದ್ದರೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದರು. ಪೊಲೀಸರು ಆತನನ್ನು ಸುಮ್ಮನೆ ಬಿಟ್ಟು ಕಳುಹಿಸುವ ಪ್ರಮೇಯ ಬರುತ್ತಿರಲಿಲ್ಲ" ಎಂದರು.
ರೂಪಾಂತರಿ ಕೊರೊನಾ ವೈರಸ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಕೊರೊನಾ ರೂಪಾಂತರ ವಿದೇಶದಲ್ಲೇ ನಡೆಯುತ್ತೆ ಎಂದು ಹೇಳಲು ಆಗುವುದಿಲ್ಲ. ಆದರೆ, ಭಾರತದಲ್ಲೂ ಇಂತಹ ಬದಲಾವಣೆ ಅಲ್ಲಗಳೆಯುವಂತಿಲ್ಲ. ವಿದೇಶಿ ಪ್ರಯಾಣಿಕರಿಗೆ ಕ್ವಾರೈಂಟೈನ್, ಆರ್ಟಿಪಿಸಿಆರ್ ಎನ್ನುತ್ತಿದೆ. ಆದರೆ, ವಿಮಾನ ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ನಡೆಯುತ್ತಿಲ್ಲ. ಸರಕಾರದ ನಡುವಿನ ಸಮಸ್ವಯದ ಕೊರತೆ ಜನರ ಮೇಲೆ ಪರಿಣಾಮ ಬೀರುತ್ತದೆ" ಎಂದು ತಿಳಿಸಿದರು.
ನೈಟ್ ಕರ್ಫ್ಯೂ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಈ ಬಗ್ಗೆ ಸರಕಾರಕ್ಕೆ ವೈಜ್ಞಾನಿಕ ತಿಳುವಳಿಕೆ ಇಲ್ಲ" ಎಂದರು.
ಶಾಲಾರಂಭದ ಬಗ್ಗೆ ಮಾತನಾಡಿದ ಅವರು, "ಶಾಲಾರಂಭದ ಬಗ್ಗೆಯೂ ಗೊಂದಲವಿದೆ. ಸರಕಾರ ಈ ಬಗ್ಗೆ ಸ್ಪಷ್ಟವಾದ ನಿರ್ಧಾರ ಹೊಂದಬೇಕಿದೆ. ಶಾಲಾರಂಭದ ಬಗ್ಗೆ ಜನರಲ್ಲಿ ಇನ್ನೂ ಕೂಡಾ ಗೊಂದಲವಿದೆ. ಆಫ್ಲೈನ್, ಆನ್ಲೈನ್ ಎರಡು ಆಯ್ಕೆಯ ಅವಕಾಶ ಅಸಮಂಜಸ. ಆಫ್ಲೈನ್ ಶುರವಾದ ಬಳಿಕ ಆನ್ಲೈನ್ ಸೂಕ್ತವೇ?" ಎಂದು ಪ್ರಶ್ನಿಸಿದರು.