ಕುಂದಾಪುರ, ಜೂ 21: ಕುಂದಾಪುರದಲ್ಲಿ ನಿರ್ಮಾಣವಾಗುತ್ತಿರುವ ನವಯುಗ ಕೃಪಾಪೋಷಿತ ಮೇಲ್ಸೆತುವೆ ಕಾಮಗಾರಿ ಮುಗಿಯುವ ಲಕ್ಷ್ಮಣ ಕಾಣುತ್ತಿಲ್ಲ. ಈಗಾಗಲೇ 8 ವರ್ಷಗಳನ್ನು ಕಂಡಿರುವ ಈ ಮೇಲ್ಸೆತುವೆ ಕಾಮಗಾರಿ ಮುಗಿದು ವಾಹನಗಳ ಸಂಚಾರಕ್ಕೆ ಮುಕ್ತವಾಗಲು ಇನ್ನೆಷ್ಟು ವರ್ಷಗಳನ್ನು ಕಾಯಬೇಕು ಎನ್ನುವ ಜನರ ಪ್ರಶ್ನೆಗೆ ಉತ್ತರ ದೊರಕುತ್ತಿಲ್ಲ. ಈ ಕಾಮಗಾರಿಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಅಸಮಾಧಾನ, ಆಕ್ರೋಶ ಹರಿದಾಡುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡಾ ಮಂದಗತಿಯ ಕಾಮಗಾರಿಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
ಕುಂದಾಪುರದ ಹೃದಯ ಭಾಗದ ಸೌಂದರ್ಯವನ್ನೇ ಈ ಕಾಮಗಾರಿ ಹಾಳು ಮಾಡಿದ್ದು, ಒಂದೆರಡು ವರ್ಷದಲ್ಲಿ ಮುಗಿಯಬೇಕಾದ ಕಾಮಗಾರಿ ಸಂಸ್ಥೆಯವರ ತಾಂತ್ರಿಕ ಸಮಸ್ಯೆಗಳಿಂದ ಇಷ್ಟೊಂದು ಹಿನ್ನೆಡೆ ಕಂಡುಕೊಳ್ಳುತ್ತಿದೆ. ಬೆರಳೆಣಿಕೆಯ ಕಾರ್ಮಿಕರು ಈ ಮೇಲ್ಸೆತುವೆಯ ಕಾಮಗಾರಿಯಲ್ಲಿ ನಿರತರಾಗಿದ್ದು, ಕೆಲಸವನ್ನು ವೇಗವಾಗಿ ಮಾಡಿ ಸಂಚಾರಕ್ಕೆ ಬಿಟ್ಟು ಕೊಡುವ ಮನಸ್ಸು ಇನ್ನೂ ಮಾಡಿಲ್ಲ. ಈ ಮಳೆಗಾಲದ ಒಳಗೆ ಆದರೂ ಮೇಲ್ಸೆತುವೆ ಆಗುತ್ತದೆ ಎಂದು ಕಳೆದ ವರ್ಷ ನಂಬಲಾಗಿತ್ತು. ಆದರೆ ಈಗ ನಡೆಯುತ್ತಿರುವ ಕಾಮಗಾರಿ ಗಮನಿಸಿದರೆ 2020 ಆದರೂ ಪ್ಲೈ ಓವರ್ ಆಗೋ ಲಕ್ಷಣ ಕಾಣುವುದಿಲ್ಲ
ಮೇಲ್ಸೆತುವೆ ಕಾಮಗಾರಿ ಮಂದಗತಿ ಯಿಂದಾಗಿ ಸಂಚಾರಕ್ಕೆ ತೀವ್ರ ಅಡಚಣೆ ಯಾಗುತ್ತಿದೆ. ಕುಂದಾಪುರದ ಹೆಬ್ಬಾಗಿಲು ಶಾಸ್ತ್ರಿವೃತ್ತವೇ ಆಗಿರುವುದರಿಂದ ಅಂತರಾಜ್ಯಗಳ ಸಂಪರ್ಕವನ್ನು ಈ ಪ್ರದೇಶ ಪಡೆದುಕೊಳ್ಳುತ್ತದೆ. ದಿನ ಸಾವಿರಾರು ವಾಹನಗಳು ಈ ಹೆದ್ದಾರಿಯಲ್ಲಿ ಚಲಿಸುವುದರಿಂದ ಮೇಲ್ಸೆತುವೆಗೆ ಹೆದ್ದಾರಿಯ ಬಹುಭಾಗ ತ್ಯಾಗ ಮಾಡಿದ್ದು, ಸಂಚಾರ ವ್ಯತಯಕ್ಕೆ ಕಾರಣವಾಗುತ್ತಿದೆ. ಮೇಲ್ಸೆತುವೆ ಕಾಮಗಾರಿ ಆರಂಭವಾದಂದಿನಿಂದ ಇಲ್ಲಿ ಸಂಚಾರ ವ್ಯತ್ಯಯ ಮಾಮೂಲಿಯಾಗಿದೆ. ಈ ಬಗ್ಗೆ ಸಾಕಷ್ಟು ಮನವಿ, ದೂರುಗಳನ್ನು ನೀಡಿದರೂ ಕೂಡಾ ಮೇಲ್ಸೆತುವೆ ಕಾಮಗಾರಿ ವೇಗವಾಗಿ ನಡೆಯುತ್ತಿಲ್ಲ. ಅದೇ ಮಂದಗತಿಯಿಂದ ಕಾಮಗಾರಿ ನಡೆಯುತ್ತಿದೆ.
ಕುಂದಾಪುರದ ಮೇಲ್ಸೆತುವೆಯ ಬಗ್ಗೆ ಸಂಬಂಧಪಟ್ಟ ಸಂಸದರ ಗಮನಕ್ಕೂ ತರಲಾಗಿದೆ. ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೂ ತರಲಾಗಿತ್ತು. ಯಾವುದಕ್ಕೂ ಸ್ಪಂದನೇ ಮಾತ್ರ ಇಲ್ಲ. ಹಾಗಾಗಿ ಸಾರ್ವಜನಿಕ ಅಸಮಾಧಾನ ವ್ಯಕ್ತವಾಗುತ್ತಿದೆ. ಇದೊಂದು ಪ್ರಾಚೀನ ಶಾಸನದ ರೀತಿ ಭಾಸವಾಗುತ್ತದೆ. ನವಯುಗ ಕಂಪೆನಿ ಗಡಿಬಿಡಿಯಲ್ಲಿ ಟೋಲ್ ವಸೂಲಿಗೆ ಮುಂದಾಗಿದೆ. ಅದೇ ವೇಗದಲ್ಲಿ ಮೇಲ್ಸೆತುವೆ ಕೆಲಸ ಮಾಡಿದ್ದರೆ ಇಷ್ಟರ ಒಳಗೆ ಈ ಮೇಲ್ಸೆತುವೆ ನಿರ್ಮಾಣವಾಗುತ್ತಿತ್ತು.
ಮೇಲ್ಸೆತುವೆಯ ಎರ್ರಾಬಿರ್ರಿ ಕಾಮಗಾರಿಯಿಂದ ಇನ್ನೂ ಮಳೆ ನೀರಿನ ಸಮಸ್ಯೆ ಉಂಟಾಗುತ್ತದೆ. ಈಗಾಗಲೇ ಚರಂಡಿ, ತೋಡುಗಳ ಸಂಪರ್ಕ ಕಡಿತಗೊಂಡಿರುವುದರಿಂದ ಮಳೆನೀರು ಹರಿಯುವಿಕೆಗೂ ತೊಂದರೆಯಾಗುತ್ತಲೇ ಇದೆ. ಇತ್ತೀಚೆಗೆ ಸರ್ವಿಸ್ ರಸ್ತೆ ನಿರ್ಮಾಣ ಮಾಡಿರುವುದು ತುಸು ಸಂಚಾರ ಸಮಸ್ಯೆಗೆ ಪರಿಹಾರ ದೊರಕಿದಂತಾಗಿದೆ ಆದರೂ ಶಾಸ್ತ್ರೀ ವೃತ್ತದ ಮೂಲಕ ಘನವಾಹನಗಳು ಹೆದ್ದಾರಿ ಬಿಟ್ಟು ಪೇಟೆಯೊಳಗೆ ಚಲಿಸುವುದು ಮಾಮೂಲಾಗಿದೆ.
ಇತ್ತ ಕೆಎಸ್ಆರ್ಟಿ ಬಸ್ ನಿಲ್ದಾಣದಿಂದಲೇ ಕಾಮಗಾರಿ ಅರ್ಧಂಬರ್ಧವಾಗಿದೆ. ಹಿಂದೆ ಅಂಡಾರ್ಪಾಸ್ ನಿರ್ಮಾಣಕ್ಕೆ ಮಾಡಲಾಗಿರುವ ನಿರ್ಮಾಣವೂ ಹಾಗೆಯೇ ಇದೆ. ಕೆಎಸ್ಆರ್ಟಿಸಿ ನಿಲ್ದಾಣದ ಹತ್ತಿರ ಹೊಂಡ ತಗೆದು ಇಡಲಾಗಿದೆ. ಕಾಮಗಾರಿಗಾಗಿ ಯದ್ವಾತದ್ವಾ ಹರವಿ ಹಾಕಿರುವ ಸಲಕರಣೆಗಳೆ ಸಾಕಷ್ಟು ಸಂಚಾರ ವ್ಯತ್ಯಯಕ್ಕೆ ಕಾರಣವಾಗುತ್ತಿದೆ. ಇನ್ನೂ ಬಸ್ರೂರು ಮೂರ್ಕೈ ಸಮಸ್ಯೆಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. ಅಲ್ಲಿಗೆ ಮೇಲ್ಸೆತುವೆಯೇ ಬೇಕು ಎನ್ನುವ ಸಾರ್ವಜನಿಕರ ಹೋರಾಟ ಹಾಗೆಯೇ ಉಳಿದುಕೊಂಡಿದೆ. ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಮಾಡದಿರುವುದು ಕೂಡಾ ಬೇಜಬ್ದಾರಿಯನ್ನು ಎತ್ತಿ ತೋರಿಸುತ್ತಿದೆ.