ಸುಳ್ಯ, ಜೂ 22 :ನಿರುದ್ಯೋಗ ಯುವಕರಿಗೆ ವಿದೇಶಗಳಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ಸುಮಾರು ರೂ. 1 ಕೋಟಿಗೂ ಹೆಚ್ಚು ಮೊತ್ತದ ಹಣವನ್ನು ವಂಚಿಸಿರುವ ಪ್ರಕರಣ ಸುಳ್ಯದಲ್ಲಿ ತಡವಾಗಿ ಬೆಳಕಿಗೆ ಬಂದಿದ್ದು, ಸುಳ್ಯ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸುಳ್ಯದ ಜ್ಯೋತಿ ಸರ್ಕಲ್ ಬಳಿಯ ಪ್ಲಾಟಿನಂ ಬಿಲ್ಡಿಂಗ್ನಲ್ಲಿ ಕೇರಳದ ಪಾಲಕ್ಕಾಡ್ ಅಮರ್ಜಿತ್ ಎಂಬ ವ್ಯಕ್ತಿ ಸಲ್ಟಿಕ್ಸ್ ಸಿಸ್ಕೋ ಕನ್ಸಲ್ಟೆಂಟ್ಸ್ ಎಂಬ ಕಚೇರಿಯನ್ನು ಮಾಡಿ, ನಿರುದ್ಯೋಗಿ ಯುವಕರಿಗೆ ಉದ್ಯೋಗ ಮತ್ತು ವೀಸಾ ಕೊಡಿಸುವ ವ್ಯವಹಾರ ಮಾಡುತ್ತಿದ್ದು, ಅಮಾಯಕ ಯುವಕರಿಗೆ ಕೋಟ್ಯಾಂತರ ರೂ ವಂಚಿದ್ದಾನೆ.
ಕೆಲವು ತಿಂಗಳಿನಿಂದ ದ.ಕ., ಉಡುಪಿ ಹಾಗೂ ಕೊಡಗು ಜಿಲ್ಲೆಗಳ ಮಂಗಳೂರು, ಗೋಣಿಕೊಪ್ಪ, ಬೆಳ್ತಂಗಡಿ, ಮಡಿಕೇರಿ, ಸುಳ್ಯದ ಅರಂತೋಡು, ಪೆರಾಜೆ ಮುಂತಾದ ಕಡೆಗಳ ಸುಮಾರು 80 ಕ್ಕೂ ಹೆಚ್ಚು ನಿರುದ್ಯೋಗಿ ಯುವಕರಿಂದ ಮಲೇಷ್ಯಾ, ಸಿಂಗಾಪುರ, ದುಬೈಗಳಲ್ಲಿ ಉದ್ಯೋಗ ದೊರಕಿಸಿ, ವೀಸಾ ಕೊಡಿಸುವುದಾಗಿ ಭರವಸೆ ನೀಡಿದ್ದು, ಇದಕ್ಕಾಗಿ ನಾನಾ ದೇಶಗಳಿಗೆ ನಾನಾ ಮೊತ್ತ ನಿಗದಿ ಮಾಡಿ ಮುಂಗಡವಾಗಿ ಲಕ್ಷಾಂತರ ಹಣವನ್ನು ಯುವಕರಿಂದ ಪಡೆದಿದ್ದ. ಉಳಿಕೆ ಹಣವನ್ನು ಕೆಲಸ ಸಿಕ್ಕಿದ ಬಳಿಕ ವಿದೇಶಿ ಕಂಪೆನಿಗಳು ಸಂಬಳದಿಂದ ಭರಿಸಿ ಕೊಳ್ಳುವುದಾಗಿಯೂ ನಂಬಿಸಿದ್ದ. ಈತನ ಮಾತಿಗೆ ಮರುಳಾದ ಯುವಕರು ಹಣವನ್ನು ಒಟ್ಟುಗೂಡಿಸಿ ಅಮರ್ಜಿತ್ಗೆ ನೀಡಿದ್ದರು. ನಂತರ ಅಮರ್ಜಿತ್ ಯುವಕರಿಂದ ಅವರ ಪಾಸ್ಪೋರ್ಟ್ ಹಾಗೂ ಹಣ ಪಡೆದುಕೊಂಡು ಕೆಲದಿನಗಳ ನಂತರ ವೀಸಾದ ನಕಲಿ ಪ್ರತಿ ನೀಡಿ ಯುವಕರನ್ನು ನಂಬಿಸಿದ್ದ, ನಂತರ ಹಣ ನೀಡಿದ ಯುವಕರು ವೀಸಾಗಾಗಿ ಆತನನ್ನು ಸಂಪರ್ಕಿಸಿದಾಗ, ಆತನ ಮಾತಿನಿಂದ ಸಂಶಯಗೊಂಡು ಆತಂಕಗೊಂಡ ಯುವಕರು ಸುಳ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಅಮರ್ಜಿತ್ ಕಚೇರಿಗೆ ಸುಳ್ಯ ಪೋಲೀಸರು ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ವಂಚನೆಗೊಳಗಾದ ಯುವಕನ ತಾಯಿ ಗೋಣಿಕೊಪ್ಪದ ಪೊನ್ನಮ್ಮ ಮುರುಗೇಶ್ ಸುಳ್ಯ ಪೋಲಿಸ್ ಠಾಣೆಯಲ್ಲಿ ಆತನ ಮೇಲೆ ದೂರು ನೀಡಿದ್ದು, ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.