ಮಂಗಳೂರು, ಜೂ22: ನಗರದ ವಿಶ್ವವಿದ್ಯಾಲಯದಿಂದ ತುಳು ಎಂಎ ಕೋರ್ಸ್ ಈ ಶೈಕ್ಷಣಿಕ ವರ್ಷದಲ್ಲಿ ಜಾರಿಗೆ ಬರಲಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಪದವಿಯಲ್ಲಿ ಭಾಷಾ ಅಥವಾ ಐಚ್ಛಿಕ ವಿಚಾರವಾಗಿ ತುಳುವನ್ನು ಅಧ್ಯಯನ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ಸಿಗಲಿದೆ.
ಮಂಗಳೂರು ವಿಶ್ವವಿದ್ಯಾಲಯದ ಆಡಳಿತ ಸೌಧದ ಹೊಸ ಸೆನೆಟ್ ಸಭಾಂಗಣದಲ್ಲಿ ನಡೆದ ವಿವಿಯ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪದವಿಯಲ್ಲಿ ಭಾಷಾ ಅಥವಾ ಐಚ್ಛಿಕ ವಿಚಾರವಾಗಿ ತುಳುವನ್ನು ಅಧ್ಯಯನ ಮಾಡಲು ಅನುಮೋದನೆ ನೀಡುವ ಮೂಲಕ ಕರಾವಳಿಯ ಪ್ರಾದೇಶಿಕ ಭಾಷೆಗೊಂದು ರಾಜಮರ್ಯಾದೆ ಸಿಕ್ಕಿದೆ.
ಈ ವೇಳೆ ಮಂಗಳೂರು ವಿವಿ ಕುಲಪತಿ ಡಾ.ಕಿಶೋರ್ ಕುಮಾರ್ ಮಾತನಾಡಿ, ತುಳು ಎಂಎ ಪದವಿಯನ್ನು ಈ ಶೈಕ್ಷಣಿಕ ವರ್ಷದಿಂದ ಆರಂಭಿಸಲಾಗುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ನೋಟಿಫಿಕೇಶನ್ವನ್ನು ಶೀಘ್ರದಲ್ಲಿ ನೀಡಲಾಗುತ್ತದೆ. ಮಂಗಳೂರು ಸಂಧ್ಯಾ ಕಾಲೇಜಿನಲ್ಲಿ ಆರಂಭವಾಗುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಉಪನ್ಯಾಸಕರ ಆಯ್ಕೆ ಹಾಗೂ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಕನ್ನಡ ಎಂಎ ಮಾಡಿದವರಿಗೆ ತುಳು ಎಂಎ ಬೋಧಿಸಲು ಅವಕಾಶ ನೀಡಲಾಗುತ್ತದೆ. ಮಾತ್ರವಲ್ಲ, ವಿದ್ಯಾರ್ಥಿಗಳ ಆಯ್ಕೆಯಲ್ಲೂ ಪ್ರವೇಶ ಪರೀಕ್ಷೆ ಹಾಗೂ ಮೌಖಿಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಈಗಾಗಲೇ ವಿವಿಯಿಂದ ಡಿಪ್ಲೊಮಾ ಮಾಡಿದವರಿಗೆ ಈ ಪರೀಕ್ಷೆಗಳನ್ನು ನಡೆಸುವ ಕುರಿತು ಮುಂದೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಪಠ್ಯ ವಿಚಾರಗಳಿಗೆ ಸಂಬಂಧಪಟ್ಟಂತೆ ಸಮಿತಿಯೊಂದನ್ನು ಮಾಡಿದ್ದು, ಇದರ ಮೂಲಕ ಸಮರ್ಥವಾಗಿ ಪಠ್ಯ ಪುಸ್ತಕ ರಚನೆ ಕಾರ್ಯ ಪೂರ್ಣಗೊಂಡಿದೆ ಎಂದು ತಿಳಿಸಿದ್ದಾರೆ.