Harshini
ಬ್ರಹ್ಮಾವರ, ಡಿ. 27 (DaijiworldNews/MB) : ಕಬ್ಬು ಬೆಳೆದಾರರಿಗೆ ಏಕೈಕ ಆಸರೆಯಾಗಿದ್ದ ಬ್ರಹ್ಮಾವರದ ಸಕ್ಕರೆ ಕಾರ್ಖಾನೆಯ ಯಂತ್ರಗಳು ನಿಂತು ದಶಕಗಳೇ ಕಳೆದಿವೆ. ಈ ಹಿಂದೆ ಹಲವಾರು ಸರಕಾರಗಳು ಬಂದು ಹೋದರೂ ಕೇವಲ ಭರವಸೆ ಮಾತ್ರ ನೀಡಿತ್ತು. ಸಕ್ಕರೆ ಕಾರ್ಖಾನೆ ಪುನನಿರ್ಮಾಣ ಎಂದರೆ ಅದು ಸವಾಲಿನ ಮಾತೇ ಸರಿ. ಇತ್ತೀಚೆಗೆ ಆಯ್ಕೆಗೊಂಡ ಹೊಸ ಆಡಳಿತ ಮಂಡಳಿ ಕಬ್ಬು ಬೆಳೆಗಾರರಿಗೆ ಹೊಸ ಹುರುಪನ್ನು ತುಂಬುತ್ತಿದೆ.

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಬೈಕಾಡಿ ಸುಪ್ರಸಾದ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಅದರ ಪುನಶ್ಚೇತನ ಮಾಡುವ ಹೊಸ ಯೋಜನೆಯನ್ನು ಈಗಾಗಲೇ ರೂಪಿಸಲಾಗಿದೆ. ಸುಮಾರು 100 ಕೊಟಿ ರೂ ಮೊತ್ತದ ಯೋಜನೆಯಲ್ಲಿ ಸಕ್ಕರೆ ಕಾರ್ಖಾನೆ ಕೆಲಸದ ಜೊತೆಗೆ ಎಥೆನಾಲ್ ವಿದ್ಯತ್ ಉತ್ಪಾದನೆ, ಎಲ್ಪಿಜಿ ಗ್ಯಾಸ್, ಡಿಸ್ಟಿಲರಿ ಘಟಕವನ್ನು ಪ್ರಾರಂಬಿಸುವ ಚಿಂತನೆ ಇದೆ. ಈ ಬಗ್ಗೆ ಜರ್ಮನ್ ದೇಶದ ಕೈಗಾರಿಕಾ ಸಂಸ್ಥೆಯೊಂದಿಗೆ ಮಾತುಕತೆ ನಡೆದಿದೆ.
ಕಾರ್ಖಾನೆಯ ಪುನಶ್ಚೇತನದ ಜೊತೆಜೊತೆಗೆ ರೈತರಿಗೆ ಉತ್ತೇಜನ ನೀಡಲು ಕಬ್ಬಿನ ಬೀಜವನ್ನು ನೀಡುವ ಯೋಜನೆ ಕೂಡ ಇದೆ. ಅಷ್ಟೇ ಅಲ್ಲದೆ ಜಿಲ್ಲೆಯ 30 ಪ್ರಮುಖ ಕೇಂದ್ರದಲ್ಲಿ ರೈತ ಸಂಪರ್ಕ ಸಭೆಯನ್ನು ಮಾಡಲು ನಿರ್ಧರಿಸಿದೆ. 2023-24ರೊಳಗೆ ಕಾರ್ಖಾನೆಯನ್ನು ಮರು ಸ್ಥಾಪಿಸುವ ಇರಾದೆಯನ್ನು ಹೊಂದಿದೆ.
ಬ್ರಹ್ಮಾವರದಲ್ಲಿ ಆಲೆಮನೆ ಪ್ರಾರಂಭ?
ಉಡುಪಿ ಜಿಲ್ಲೆಯಲ್ಲಿ ಈಗಿರುವ ಆಲೆಮನೆಗಳೆಂದರೆ ಹೆಚ್ಚು ಕಮ್ಮಿ 5 ಅಷ್ಟೆ. 60 ರಿಂದ 70 ಮಂದಿ ಮಾತ್ರ ಕಬ್ಬು ಬೆಳೆಯುತ್ತಿದ್ದಾರೆ. ಇತ್ತೀಚೆಗೆ ಜಿಲ್ಲಾ ರೈತ ಸಂಘ, ಭಾರತೀಯ ಕಿಸಾನ್ ಸಂಘ ಜಂಟಿಯಾಗಿ ನಡೆಸಿದ ಒಂದು ಸರ್ವೆಯ ಪ್ರಕಾರ ಈಗ ಕೇವಲ 60-70 ರೈತರಷ್ಟೇ ಕಬ್ಬು ಬೆಳೆ ಕೃಷಿಯಲ್ಲಿ ತೊಡಗಿದ್ದಾರೆ. ಸುಮಾರು 1800 ರೈತರು 4000 ಎಕರೆಯಲ್ಲಿ ಈ ಕೃಷಿಯಲ್ಲಿ ತೊಡಗಿಕೊಳ್ಳುವ ಬದ್ಧತೆ ವ್ಯಕ್ತಪಡಿಸಿದ್ದಾರೆ. ವಾರಾಹಿ ನೀರು ಇದೀಗ 18000-20000 ಎಕರೆ ಕೃಷಿ ಭೂಮಿಗೆ ನೀರುಣಿಸುತ್ತಿದೆ. ಈ ಬಾರಿ ಉಡುಪಿ ಜಿಲ್ಲೆಯಲ್ಲಿ 33000 ಹೆಕ್ಟೇರ್ ಭತ್ತ ಇಳುವರಿ ಬಂದಿದೆ. ಭೌಗೋಳಿಕವಾಗಿ ದೊಡ್ಡದಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 18000 ಹೆಕ್ಟೇರ್ ನಷ್ಟು ಭತ್ತ ಇಳುವರಿ ಬಂದಿದೆ.
ಆಲೆಮನೆ ಬೆಲ್ಲಕ್ಕೆ ಬೇಡಿಕೆ ಇದೆ, ಕಬ್ಬಿನ ಪೂರೈಕೆ ಕಡಿಮೆ ಇದೆ:
ಹಿಂದೆ ಕೆದೂರು, ಶಾನಾಡಿ ಹಾಗೂ ಇನ್ನು ಕೆಲವೆಡೆ ಮಾತ್ರ ಇದ್ದ ಆಲೆಮನೆ ಈಗ ಮೂರು ಹೆಚ್ಚಾಗಿದೆ. ಹೊಂಬಾಡಿಯಲ್ಲಿರುವ ಆಲೆಮನೆಯನ್ನು ಈ ಸಕ್ಕರೆ ಕಾರ್ಖಾನೆಯ ಆವರಣದೊಳಗೆ ಸ್ಥಾಪಿಸುವ ಚಿಂತನೆ ಕೂಡ ಇದೆ.
ಮತ್ತೆಲ್ಲವೂ ಅನೇಕ ಕಾರಣಗಳಿಂದ ಮುಚ್ಚಿದೆ. ಭತ್ತದ ಕೃಷಿ ಬಿಟ್ಟು ಇನ್ನೊಂದು ಪರ್ಯಾಯ ಬೆಳೆ ಅಂದರೆ ಅದು ಕಬ್ಬು ಮಾತ್ರನೆ. ಭತ್ತ ಬೆಳೆದರೆ ಅದಕ್ಕೆ ಜಿಂಕೆ, ಹಂದಿ, ಮಂಗಗಳ ಕಾಟ ತಪ್ಪಿದ್ದಲ್ಲ. ಆದರೆ ಕಬ್ಬು ಬೆಳೆದರೆ ಹಂದಿ ಕಾಟದ ಸಮಸ್ಯೆ ಬಿಟ್ಟರೆ ಬೇರೆ ಹೆಚ್ಚು ಸಮಸ್ಯೆ ಇರುವುದಿಲ್ಲ.
ಅದಲ್ಲದೆ ಆಲೆಮನೆಯಲ್ಲಿ ಮಾಡುವ ಬೆಲ್ಲಕ್ಕೆ ತುಂಬಾ ಬೇಡಿಕೆಯಿದೆ. ಜಿಲ್ಲೆಯಲ್ಲಿ ತಯಾರಿಸುವ ಬೆಲ್ಲಕ್ಕೆ ಬೇರೆ ಜಿಲ್ಲೆಯಿಂದ ಕಬ್ಬನ್ನು ತರಿಸಿಕೊಳ್ಳುತ್ತಿದ್ದಾರೆ.
ಈಗಾಗಲೇ ಸುಮಾರು 1800 ಕಬ್ಬು ಬೆಳೆಗಾರರು ಕಬ್ಬು ಬೆಳೆಯಲು ಬದ್ದರಾಗಿದ್ದಾರೆ. ಇದರೊಂದಿಗೆ, ತಮ್ಮ ಬೆಳೆಗೆ ಭದ್ರತೆಯನ್ನು ಕೋರಿದ್ದಾರೆ ಈಗಾಗಲೇ ಕಮಿಟ್ ಮೆಂಟ್ ಪತ್ರ ಕೂಡ ಕೊಟ್ಟಿದ್ದಾರೆ. ಕೆದೂರಿನ ಮತ್ತು ಶಾನಾಡಿಯ ಆಲೆಮನೆಯಲ್ಲಿ ನಾಲ್ಕರಿಂದ ಆರು ಟನ್ಸ್ನಷ್ಟು ಬೆಲ್ಲ ತಯಾರಿ ಆಗುತ್ತದೆ. ಹೊಂಬಾಡಿಯಲ್ಲಿರುವ ಆಲೆಮನೆ ಸಾಮರ್ಥ್ಯ ಹೆಚ್ಚು ಕಡಿಮೆ 20-25 ಟನ್ ಅಷ್ಟು. ಒಂದು ಸಕ್ಕರೆ ಕಾರ್ಖಾನೆ ಕೆಲಸ ಮಾಡಲು 5000 ರಿಂದ 6000 ಎಕರೆಯಲ್ಲಿ ಕಬ್ಬು ಬೆಳೆಯಬೇಕು. ಅಷ್ಟು ಸಾಮರ್ಥ್ಯ ಜಿಲ್ಲೆಗಿದೆ.
ಸಕ್ಕರೆ ಕಾರ್ಖಾನೆ ಪುನರುಜ್ಜೀವನ ಮತ್ತು ಆಲೆಮನೆ ಪ್ರಾರಂಭಿಸುವುದು ರೈತರಲ್ಲಿ ಹೊಸ ಆಶಾಭಾವನೆ ತೋರಿದೆ. ಅಲ್ಲದೆ ಈ ವಿಧಾನ ದಿಂದ ತಮಗೂ ಲಾಭವಿದೆ ಎಂಬುದನ್ನು ಅರಿತ್ತಿದ್ದಾರೆ ಅಲ್ಲದೇ ಆಸಕ್ತಿಯನ್ನು ತೋರಿಸಿದ್ದಾರೆ. ಆದರೆ ತಮಗೆ ತಾವು ಬೆಳೆದ ಕಬ್ಬು ಬೆಳೆಗೆ ಭದ್ರತೆ ಕೊಟ್ಟರೆ ಹೆಚ್ಚಿನ ಪ್ರಮಾಣದ ರೈತರು ಇದರಲ್ಲಿ ತೊಡಗಿಸಿ ಕೊಳ್ಬಹುದು ಎಂಬುದು ಭಾರತೀಯ ಕಿಸಾನ್ ಸಂಘದ ಪ್ರದಾನ ಕಾರ್ಯದರ್ಶಿಯವರಾದ ಸತ್ಯನಾರಾಯಣ ಉಡುಪರ ಅಭಿಪ್ರಾಯ.