ಮಂಗಳೂರು, ಡಿ. 27 (DaijiworldNews/MB) : ಬಿಜೈನ ಅಪಾರ್ಟ್ಮೆಂಟ್ ಒಂದರ ಗೋಡೆಯಲ್ಲಿ ಹಾಗೂ ಕೋರ್ಟ್ ಬಳಿಕ ಗೋಡೆಯಲ್ಲಿ ಪ್ರಚೋಧನಕಾರಿ ಗೋಡೆ ಬರಹ ಪ್ರಕರಣಕದ ಸೂತ್ರಧಾರಿಯಾಗಿರುವ ವ್ಯಕ್ತಿ ಪ್ರಸ್ತುತ ಸೌದಿ ಅರೇಬಿಯಾದಲ್ಲಿದ್ದಾನೆ ಎಂದು ನಗರ ಪೊಲೀಸರಿಗೆ ಮಾಹಿತಿ ಸಿಕ್ಕಿದೆ ಎಂದು ಹೇಳಲಾಗಿದೆ.

ಗೋಡೆ ಬರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ತೀರ್ಥಹಳ್ಳಿಯ ಮೊಹಮ್ಮದ್ ಶಾರಿಕ್, ಮಾಜ್ ಮುನೀರ್ ಮತ್ತು ಸಾದಿಕ್ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಶಾರಿಕ್ ಮತ್ತು ಮುನೀರ್ ತಮ್ಮ ಹೇಳಿಕೆಯಲ್ಲಿ ಕೆಲವು ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಗೋಡೆಗಳ ಮೇಲೆ ಬರೆಯುವ ಮೊದಲು ಆರೋಪಿ ವಿದೇಶದಲ್ಲಿ ವಾಸಿಸುವ ವ್ಯಕ್ತಿಯೊಂದಿಗೆ ಮಾತನಾಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಸಂಬಂಧಪಟ್ಟ ವ್ಯಕ್ತಿಯು ತೀರ್ಥಹಳ್ಳಿಯ ಸ್ಥಳೀಯನಾಗಿದ್ದು ಸಂಘಟನೆಯ ಕಾರ್ಯಕರ್ತ ಎಂದು ಹೇಳಲಾಗಿದೆ. ಈ ವ್ಯಕ್ತಿಯು ಮುನೀರ್ ಮತ್ತು ಶಾರಿಕ್ ಅವರನ್ನು ಈ ಕೃತ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಿದ್ದಾನೆ ಎಂದು ಹೇಳಲಾಗಿದೆ.
ಆದರೆ ಸೌದಿಯಲ್ಲಿರುವ ವ್ಯಕ್ತಿಯು ಯಾರೊಂದಿಗೆ ಅಥವಾ ಯಾವ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾನೆ, ಯಾವ ಉದ್ದೇಶದಿಂದ ಗೋಡೆ ಬರಹ ಬರೆಯಲು ಸೂಚಿಸಿದ್ದಾನೆ, ಆತನಿಗೆ ಭಯೋತ್ಪಾದಕ ಸಂಘಟನೆಗಳೊಂದಿಗೆ ಯಾವುದಾದರೂ ಸಂಬಂಧವಿದೆಯೇ ಎಂಬ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ. ಆತನಿಗೆ ಲುಕ್ ಔಟ್ ನೋಟಿಸ್ ನೀಡಿರುವ ಪೊಲೀಸರು, ಆತನನ್ನು ವಶಕ್ಕೆ ಪಡೆದುಕೊಂಡರೆ ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ಹೊರತರುವ ಭರವಸೆ ಇದೆ.
ನಗರದಲ್ಲಿ ಪ್ರಕ್ಷುಬ್ಧತೆ ಸೃಷ್ಟಿ ಮಾಡುವ ಉದ್ದೇಶದಿಂದ ಸೌದಿಯಲ್ಲಿ ಸಂಘಟನೆಯಲ್ಲಿರುವ ವ್ಯಕ್ತಿ ನಗರದ ವ್ಯಕ್ತಿಗಳಿಗೆ ಕರೆ ಮಾಡಿದ್ದಾನೆ ಎನ್ನಲಾಗಿದೆ. ನ್ಯಾಯಾಂಗ ಬಂಧನದಲ್ಲಿದ್ದ ಮೂವರಿಗೆ ಆ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಹೇಳಲಾಗಿದೆ. ಪೊಲೀಸರು ಆತನ ಗುರುತನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಆತ ಯಾವುದಾದರೂ ಸಂಘಟನೆಯ ಸದಸ್ಯನಾಗಿದ್ದಾನೆಯೇ ಎಂದು ಕಂಡುಹಿಡಿಯಲು ಸಹ ಪ್ರಯತ್ನಿಸುತ್ತಿದ್ದಾರೆ.