ಬೆಂಗಳೂರು, ಜೂ22: ನನ್ನ ಬಳಿಯೂ ಬಿಜೆಪಿ ಡೈರಿಗಳಿವೆ, ಸಮಯ ಬಂದಾಗ ಅವುಗಳನ್ನು ರಿಲೀಸ್ ಮಾಡುತ್ತೇನೆ ಎಂದು ಕಳೆದೆರಡು ದಿನಗಳ ಹಿಂದೆ ಸಚಿವ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದು, ಇದೀಗ ಈ ಹೇಳಿಕೆಗೆ ಸಂಸದೆ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.
ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ತಮ್ಮ ಬಳಿಯಿರುವ ಬಿಜೆಪಿ ನಾಯಕರ ಡೈರಿಗಳನ್ನು ಬಿಡುಗಡೆ ಮಾಡಲು ಡಿ.ಕೆ ಶಿವಕುಮಾರ್ ಸ್ವತಂತ್ರರು. ತಪ್ಪಿತಸ್ಥರ ವಿರುದ್ಧ ಕಾನೂನು ಸೂಕ್ತ ಕ್ರಮ ಕೈಗೊಳ್ಳುತ್ತದೆ. ಹೀಗಾಗಿ ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರದ ತನಿಖೆಯನ್ನು ಯಾರೂ ತಡೆಯುವುದಿಲ್ಲ. ಬಿಜೆಪಿ ಡೈರಿಯ ತನಿಖೆ ನಡೆಸಲು ಡಿ.ಕೆ ಶಿವಕುಮಾರ್ ರಾಜ್ಯ ಸರ್ಕಾರದಲ್ಲಿ ತಮ್ಮ ಪವರ್ ಬಳಸಿಕೊಳ್ಳಬಹುದು ಎಂದು ಸವಾಲು ಹಾಕಿದ್ದಾರೆ.
ಕಳೆದ 5 ದಶಕಗಳಿಂದ ಆದಾಯ ತೆರಿಗೆ ಇಲಾಖೆಗೆ ದಾಳಿ ಮಾಡಲು ಕಾಂಗ್ರೆಸ್ ಸರ್ಕಾರ ಅನುಮತಿ ನೀಡಿತ್ತು. ಆದರೆ ಇದೀಗ ಐಟಿ ಇಲಾಖೆ ದಾಳಿ ರಾಜಕೀಯ ಪ್ರೇರಿತ ಎಂದು ಡಿಕೆಶಿ ಅಳುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.