ಮಂಗಳೂರು, ಡಿ. 27 (DaijiworldNews/MB) : ''ಜನವರಿ 1 ರಿಂದ ದೇಶಾದ್ಯಂತ ಟೋಲ್ ಕೇಂದ್ರಗಳಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯ ಆದೇಶವನ್ನು ಮುಂದಿಟ್ಟು ಸುರತ್ಕಲ್ ಎನ್ಐಟಿಕೆ ಬಳಿ ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ತಾತ್ಕಾಲಿಕ ಟೋಲ್ ಕೇಂದ್ರದಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡುವ ಯತ್ನ ನಡೆಯುತ್ತಿದೆ. ಇದು ಸ್ಥಳೀಯ ವಾಹನಗಳ ರಿಯಾಯತಿಗಳನ್ನು ಕಸಿಯುವ, ತಾತ್ಕಾಲಿಕ ಟೋಲ್ ಕೇಂದ್ರವನ್ನು ಅಕ್ರಮವಾಗಿ ಶಾಶ್ವತಗೊಳಿಸುವ ಯತ್ನ. ಯಾವುದೇ ಕಾರಣಕ್ಕೂ ಸುರತ್ಕಲ್ ಟೋಲ್ ಗೇಟ್ ನಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡುವುದನ್ನು ಒಪ್ಪಲಾಗದು. ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್ ಇದನ್ನು ಪ್ರಬಲವಾಗಿ ವಿರೋಧಿಸಲಿದೆ'' ಎಂದು ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

''ಸುರತ್ಕಲ್ ಟೋಲ್ ಕೇಂದ್ರ ಐದು ವರ್ಷಗಳ ಹಿಂದೆ ಅರು ತಿಂಗಳ ಅವಧಿಗೆ ತಾತ್ಕಾಲಿಕ ನೆಲೆಯಲ್ಲಿ ಅನುಮತಿಯನ್ನು ಪಡೆದಿತ್ತು. ಮೂರು ವರ್ಷಗಳ ಹಿಂದೆ ಹೆಜಮಾಡಿ ಟೋಲ್ ಕೇಂದ್ರದಲ್ಲಿ ಸುರತ್ಕಲ್ ತಾತ್ಕಾಲಿಕ ಟೋಲ್ ಕೇಂದ್ರವನ್ನು ವಿಲೀನಗೊಳಿಸುವ ತೀರ್ಮಾನವನ್ನು ಹೆದ್ದಾರಿ ಪ್ರಾಧಿಕಾರ ತೆಗೆದುಕೊಂಡಿತ್ತು. ಆ ನಿರ್ಣಯಕ್ಕೆ ಕರ್ನಾಟಕ ಸರಕಾರದ ಅನುಮೋದನಯೂ ದೊರಕಿತ್ತು. ಆದರೆ ಈವರಗೆ ವಿಲೀನದ ತೀರ್ಮಾನವನ್ನು ಜಾರಿಗೊಳಿಸದೆ ಸುರತ್ಕಲ್ ಟೋಲ್ ಕೇಂದ್ರವನ್ನು ತಾತ್ಕಾಲಿಕ ನೆಲೆಯಲ್ಲಿ ಅಕ್ರಮವಾಗಿ ಮುಂದುವರಿಸುತ್ತಾ ಬರಲಾಗಿದೆ. ಈ ನಡುವೆ ಸ್ಥಳೀಯ ಸಂಘ ಸಂಸ್ಥೆಗಳು ಹೋರಾಟ ಸಮಿತಿಯ ನೇತೃತ್ವದಲ್ಲಿ ಪ್ರಬಲ ಹೋರಾಟ ನಡೆಸಿದ ಹಿನ್ನಲೆಯಲ್ಲಿ ಸ್ಥಳೀಯ ಪ್ರಯಾಣಿಕರ ಬಸ್ಸು ಸಹಿತ ಸಾರಿಗೆ ವಾಹನಗಳಿಗೆ ರಿಯಾಯತಿ, ಸ್ಥಳೀಯ ಖಾಸಗಿ ವಾಹನಗಳಿಗೆ ಸುಂಕ ರಹಿತ ಓಡಾಟದ ಅವಕಾಶ ಕಲ್ಪಿಸಲಾಗಿದೆ. ಈಗ ಫಾಸ್ಟ್ ಟ್ಯಾಗ್ ಕಡ್ಡಾಯದ ನೆಪದಲ್ಲಿ ಈ ರಿಯಾಯತಿಗಳನ್ನು ರದ್ದುಗೊಳಿಸುವ ಯತ್ನ ನಡೆಯುತ್ತಿದೆ. ಇದು ಅಕ್ರಮವಾಗಿದ್ದು ಯಾವುದೇ ಕಾರಣಕ್ಕೂ ಸುರತ್ಕಲ್ ತಾತ್ಕಾಲಿಕ ಟೋಲ್ ಕೇಂದ್ರದಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಕೂಡದು'' ಎಂದು ಹೋರಾಟ ಸಮಿತಿ ಆಗ್ರಹಿಸಿದೆ.
''ಸುರತ್ಕಲ್ ಟೋಲ್ ಕೇಂದ್ರವನ್ನು ಹೆಜಮಾಡಿ ಟೋಲ್ ಕೇಂದ್ರದೊಂದಿಗೆ ವಿಲೀನಗೊಳಿಸುವ ತೀರ್ಮಾನ ಜಾರಿಗೊಳಿಸುವ ವರಗೆ ಈಗಿರುವ ರಿಯಾಯತಿಗಳನ್ನು ಮುಂದುವರಿಸಿ ಯಥಾಸ್ಥಿತಿ ಕಾಪಾಡಬೇಕು'' ಎಂದು ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.
''ಬಸ್ಸುಗಳು, ಸಾರಿಗೆ ವಾಹನಗಳು ಸಹಿತ ಸ್ಥಳೀಯ ಖಾಸಗಿ ವಾಹನ ಸವಾರರು ಫಾಸ್ಟ್ ಟ್ಯಾಗ್ ಅನ್ನು ತಿರಸ್ಕರಿಸುವ ಮೂಲಕ ಪ್ರಬಲ ಪ್ರತಿಭಟನೆ ಒಡ್ಡಬೇಕು'' ಎಂದು ಅವರು ವಿನಂತಿಸಿದ್ದಾರೆ.